Tuesday, March 27, 2012

ಹೆಣದ ಬೆಲೆ (ಕವನ)


ಹೆಣದ ಬೆಲೆ

ಹೆಣದ ಬೆಲೆ
ಹೆಣದ ಬೆಲೆ,
ಸತ್ತವನಿಗೆ ತಿಳಿಯದ್ದು
ಹೊತ್ತವನಿಗೆ ನಿಲುಕದ್ದು

ಹೆಣದ ಬೆಲೆ,
ಹೂತವನಿಗೆ
ಹೂತ ಮಣ್ಣಿಗೆ 
ಸುಟ್ಟವನಿಗೆ
ಸುಟ್ಟ ಕಟ್ಟಿಗೆಗೆ
ಸಂಸ್ಕಾರಕ್ಕೆ
ಸಾಗಿಸಿದ ಪೂಜಾರಿಗೆ
ಸತ್ತವನಿಗೆ ತಿಳಿಯದ್ದು
ಹೊತ್ತವನಿಗೆ ನಿಲುಕದ್ದು-
ಹೆಣದ ಬೆಲೆ

ಹೆಣದ ಬೆಲೆ,
ಒಡೆದ ಮಣ್ಣ ಕೊಡಕ್ಕೆ
ಹೊಳೆವ ಕನ್ನಡಿ ಚೂರಿಗೆ
ಸೇರಿ ಝರಿಗೆ ಬೂದಿ
ಗಾಳಿಗೆ ಕಿಡಿ ಮೈಯೊಡ್ಡಿ
ಧರೆಗಿಳಿಯೆ ಸತ್ತ್ವ,
ಹೆಣದ ಬೆಲೆ,
ಹೂತಿದ್ದಕ್ಕೆ
ಸುಟ್ಟಿದ್ದಕ್ಕೆ
ಸಂಸ್ಕಾರಕ್ಕೆ
ಹೆಣದ ಬೆಲೆ,
ಬೊಗಳೆ ಭಾಷಣಕ್ಕೆ,
ಕುರುಡು ಕಂಬನಿಗೆ,
ಭೊಜ್ಜ ಭೋಜನಕ್ಕೆ
ಹೆಣದ ಬೆಲೆ,
ತೊರೆದ ಸಂಬಂಧಕ್ಕೇ?
ಮಿಡಿವ ಹೃದಯಕ್ಕೇ?
ತೆರೆವ ಶೂನ್ಯಕ್ಕೇ?

ನಿರ್ಜೀವ ಜೀವ
ಒಡಲೊಡೆದುಕೊಂಡೆ
ಜಗವ ನೋಡೆ ಜೀವ
ಸಮಯಕ್ಕೆ ಸೇರಿ
ಸವೆಯುತ್ತ ಸಾಗೆ ಜೀವನ
ದೇವ ಪ್ರೀತಿಸಿ
ದೇಹ ಹೆಣವಾಗೆ
ಅಮೂರ್ತ ಛಾಯೆ;
ಆಡುವ ಮಾತಿಲ್ಲ
ಹಾಡುವ ಹಾಡಿಲ್ಲ
ನಗುವ ನಗುವಿಲ್ಲ
ಅಳುವ ಅಳುವಿಲ್ಲ
ಬೈವ ಸಿಟ್ಟಿಲ್ಲ
ನಡೆವ ನಡೆಯಿಲ್ಲ
ಕಾಂಬ ಕನಸಿಲ್ಲ
ಬೆರೆತ ಮನದೊಳಗೆ
ಕತ್ತಲೆಯಾಟ
ಮೌನ ಸಾಮ್ರಾಜ್ಯ
ಶೂನ್ಯ ಸಹವಾಸ
ನಿನ್ನೆ ಆಶಯ,
ಇಂದು ನೆನಪು,
ನಾಳೆ?!

ಹೆಣದ ಬೆಲೆ,
ಅದು-
ಹಣಕ್ಕೂ ಮಿಗಿಲು
ಅನಂತದ ಉಸಿರು
ಕ್ಲಿಷ್ಟತೆಯ ಮಡಿಲು
ಸತ್ತವನಿಗೆ ತಿಳಿಯದ್ದು
ಹೊತ್ತವನಿಗೆ ನಿಲುಕದ್ದು
ಅದು-
ಹೆಣದ ಬೆಲೆ! 

1 comment:

  1. ವಿವೇಕ್ ಹೆಗಡೆ30.11.17

    ಬದುಕು ಮುಗಿದಮೇಲೆ ಉಳಿದವರಿಗೆ ಬೆಳೆತಿಳಿವ ತರದಿ ತೋರ್ಪಡಿಸಿದ ಸಾಲುಗಳು ಅದ್ಭುತ...

    ReplyDelete