Saturday, June 2, 2012

ನಾಳೆಗೆ ತೆರೆಯುತ್ತ

ನಾಳೆಗೆ ತೆರೆಯುತ್ತ....

ಮರಿಗುಬ್ಬಚ್ಚಿ ಸತ್ತ ಮರದ ಕೆಳಗೀಗ
ಮರಣ ರೋದನ
ಬಚ್ಚಿಟ್ಟ ಮರಿಯಿಂದು ಗೂಡೊಳಗಿಲ್ಲ
ಕಾಣದ ತನ್ನ ಮರಿಗಾಗಿ
ಗುಬ್ಬಚ್ಚಿ ಬಾನೆಲ್ಲ ಹುಡುಕುತ್ತ
ತನ್ನನ್ನೆ ಮರೆಯುತ್ತ
ಎದೆಯೆಂಬುದಿದೆ ಅದಕ್ಕೂ
ಗುಬ್ಬಚ್ಚಿಗೂ ಮನವಿದೆ

ಆಕ್ರೋಶ-ಉದ್ವೇಗಗಳ ಪರಿ
ಅದರ ಹಿಂಡಿ ಹಿಸುಕುತ್ತ
ತನ್ನದೆಂಬುದಿದ್ದರೆ ತನ್ನ ಮರಿಯಷ್ಟೇ
ಚೀರಾಡಿದೆ
"ಚಿಂವ್ ಚಿಂವ್" ಕೂಗಾಡಿದೆ
ಅದಕ್ಕೂ ನೆನಪಿದೆ
ಮೊಟ್ಟೆಯೊಡೆದು ಮರಿ ಹೊರಬಂದ ಕ್ಷಣ
ಮರೆತಿಲ್ಲವದು
ಮರಿಗೆ ತಾನ್ ನಿನ್ನೆ ನೀಡಿದ್ದ ಗುಟುಕ


ಆ ದೂರದಲ್ಲಿ
ತಾ ಕಟ್ಟಿದ ಗೂಡು
ನಾಳೆಯ ಪ್ರತಿರೂಪದಂತಿದೆ
"ಬಾ ಉಳಿದೆರಡು ಮೊಟ್ಟೆಗೆ ಕಾವು ಕೊಡು"
ಕೈ ಬೀಸಿ ಕರೆದಂತಿದೆ


ಸಂಜೆ ಮಸುಕಿನ ಚಳಿಗಾಳಿ
ನೂಕಲು ಗುಬ್ಬಿಯ ಮತ್ತೆ ಗೂಡೊಳಗೆ
ಮೊಟ್ಟೆಗಿಟ್ಟ ಕಾವು ಫಲಿಸಿ
ಮರಿ ಮತ್ತೆ ಜನಿಸಿದೆ


ಬಿಸಿಲ ಕಂಡ ಗೂಡ ತೊರೆದು
ಗುಬ್ಬಿ ರೆಕ್ಕೆ ಬಿಚ್ಚಿ
ಮರಿಗೆ ಕೊಡುವ ಕೂಳ ನೆನೆದು
ಬಾನೆತ್ತರಕ್ಕೆ ಚಿಮ್ಮಿ
"ಚಿಂವ್ ಚಿಂವ್"
ಮರಿಯ ಕೂಗು
ಮುಂಜಾನೆ ಮಂಜಿಗೆ ಮೆರುಗು


ನಿನ್ನೆ ನಾಳೆಗಳ ಬಾಳೆ ಹಾಗೇ
ನಿನ್ನೆಯ ಮರೆಯುತ್ತ
ನಾಳೆಗೆ ತೆರೆಯುತ್ತ


********


[19-05-2012]




No comments:

Post a Comment