Monday, July 1, 2013

ಕವನ

 

ನೀ ನೀನಾಗಿಬಿಡು! 
ನಿನ್ನೆಯ ರೋಚಕ ಕಥೆಯಲ್ಲ
ನಾಳೆಗೆ ಭಾರೀ ಸುದ್ದಿಯಲ್ಲ
ಇಂತಿಪ್ಪ ಇಂದಿಗೆ ತುಡಿವ ಬದುಕಾಗಿಬಿಡು

ಮಳೆಗೆ ನಿಂತ ನೀರಲ್ಲ
ಕಣ್ಗೆ ನಿಲುಕದ ಕಡಲಲ್ಲ
ಬಿಡದೆ ಹರಿವ ಸತತ ಝರಿಯಾಗಿಬಿಡು

ಪುಟ ಮುಗಿಯದ ಕಾದಂಬರಿಯಲ್ಲ
ಬರೆದಿಟ್ಟ ಗೋಡೆ ಗಾದೆಯಲ್ಲ  
ಕೇಳಲೊಮ್ಮೆ ಮರೆಯದ ಸಣ್ಣ ಹಾಡಾಗಿಬಿಡು

ದೂರದ ನುಣ್ಣನೆ ಬೆಟ್ಟವಲ್ಲ
ಕಾಲ್ತೆಳಗೆ ಕಲೆವ ಕಳೆಯಲ್ಲ
ಬಿತ್ತಿದರೆ ತೆನೆಬಿಡುವ ಭತ್ತದ ಬೆಳೆಯಾಗಿಬಿಡು      

ಕಣ್ತೆರೆದೆ ಕಾಣುವ ಹಗಲುಗನಸಲ್ಲ
ಕಣ್ಮುಚ್ಚಲು ಕಾಡುವ ಬಚ್ಚಿಟ್ಟ ಬಯಕೆಯಲ್ಲ
ಕಾಣದೆಯೆ ಸೆಳೆವ ಪರಿಪಕ್ವ ಪ್ರೀತಿಯಾಗಿಬಿಡು

ಬಿಡಿಸಲಶಕ್ಯ ಬೀಜಗಣಿತವಲ್ಲ
ತೊಳೆದರೆ ತೊಲಗದ ನೋವಿನ ಕಲೆಯಲ್ಲ
ತನ್ನಿಷ್ಟಕ್ಕೆ ಕೈ ಗೀಚಿದ ರೇಖಾಚಿತ್ರವಾಗಿಬಿಡು

ಕಬ್ಬಿಣದ ಕಡಲೆಯಲ್ಲ
ಸುಲಿದಿಟ್ಟ ಬಾಳೆಯ ಹಣ್ಣಲ್ಲ
ಸುಲಭಕ್ಕೆ ಸೋಲದ ಎದೆಚಿಪ್ಪಿನ ಬಡಿತವಾಗಿಬಿಡು

ನೀ ನೀನಾಗಿಬಿಡು
ತಿಳಿನೀಲಿ ಬಾನಾಗಿಬಿಡು
ಅವರಿವರಿಗೆ ತೊಡಕಾಗದೆ ನೀ ಸರಿದಾರಿಯ ತುಣುಕಾಗಿಬಿಡು!

                                                                     --- 17-06-2013


3 comments:

  1. ಅವರಿವರಿಗೆ ತೊಡಕಾಗದೆ ಸರಿ ದಾರಿಯ ತುಣುಕಾಗಿಬಿಡು ಅನ್ನೋ ಆಶಯದ ಈ ಭಾವ ತುಂಬಾನೇ ಇಷ್ಟವಾಯ್ತು ...

    ಭಾವ ಬರಹ ಎರಡೂ ಹತ್ತಿರ ಅನಿಸಿತು ...
    ಮುಂದುವರೆಸಿ

    ReplyDelete
    Replies
    1. Thank you... 'ಹೆಸರಿಲ್ಲದ್ದ'ಕ್ಕೆ ಸ್ವಾಗತ...

      Delete