Monday, July 1, 2013

ಕವನ

 

ನೀ ನೀನಾಗಿಬಿಡು! 
ನಿನ್ನೆಯ ರೋಚಕ ಕಥೆಯಲ್ಲ
ನಾಳೆಗೆ ಭಾರೀ ಸುದ್ದಿಯಲ್ಲ
ಇಂತಿಪ್ಪ ಇಂದಿಗೆ ತುಡಿವ ಬದುಕಾಗಿಬಿಡು

ಮಳೆಗೆ ನಿಂತ ನೀರಲ್ಲ
ಕಣ್ಗೆ ನಿಲುಕದ ಕಡಲಲ್ಲ
ಬಿಡದೆ ಹರಿವ ಸತತ ಝರಿಯಾಗಿಬಿಡು

ಪುಟ ಮುಗಿಯದ ಕಾದಂಬರಿಯಲ್ಲ
ಬರೆದಿಟ್ಟ ಗೋಡೆ ಗಾದೆಯಲ್ಲ  
ಕೇಳಲೊಮ್ಮೆ ಮರೆಯದ ಸಣ್ಣ ಹಾಡಾಗಿಬಿಡು

ದೂರದ ನುಣ್ಣನೆ ಬೆಟ್ಟವಲ್ಲ
ಕಾಲ್ತೆಳಗೆ ಕಲೆವ ಕಳೆಯಲ್ಲ
ಬಿತ್ತಿದರೆ ತೆನೆಬಿಡುವ ಭತ್ತದ ಬೆಳೆಯಾಗಿಬಿಡು      

ಕಣ್ತೆರೆದೆ ಕಾಣುವ ಹಗಲುಗನಸಲ್ಲ
ಕಣ್ಮುಚ್ಚಲು ಕಾಡುವ ಬಚ್ಚಿಟ್ಟ ಬಯಕೆಯಲ್ಲ
ಕಾಣದೆಯೆ ಸೆಳೆವ ಪರಿಪಕ್ವ ಪ್ರೀತಿಯಾಗಿಬಿಡು

ಬಿಡಿಸಲಶಕ್ಯ ಬೀಜಗಣಿತವಲ್ಲ
ತೊಳೆದರೆ ತೊಲಗದ ನೋವಿನ ಕಲೆಯಲ್ಲ
ತನ್ನಿಷ್ಟಕ್ಕೆ ಕೈ ಗೀಚಿದ ರೇಖಾಚಿತ್ರವಾಗಿಬಿಡು

ಕಬ್ಬಿಣದ ಕಡಲೆಯಲ್ಲ
ಸುಲಿದಿಟ್ಟ ಬಾಳೆಯ ಹಣ್ಣಲ್ಲ
ಸುಲಭಕ್ಕೆ ಸೋಲದ ಎದೆಚಿಪ್ಪಿನ ಬಡಿತವಾಗಿಬಿಡು

ನೀ ನೀನಾಗಿಬಿಡು
ತಿಳಿನೀಲಿ ಬಾನಾಗಿಬಿಡು
ಅವರಿವರಿಗೆ ತೊಡಕಾಗದೆ ನೀ ಸರಿದಾರಿಯ ತುಣುಕಾಗಿಬಿಡು!

                                                                     --- 17-06-2013


Sunday, June 23, 2013



ಅರ್ಥಕಾಣದ ಘಳಿಗೆ!

ಜೋಪಡಿಯೊಳಗಿನ                                               
ಅರ್ಧಬೆಂದ ಅನ್ನ-
ತುಂಬಿದ ಕಡಾಯಿ
ತುಸುದೂರ ಮಲಗಿದ್ದ
ಬರಿಮೈಯ ದೇಹ-
ವೆರಗಿ ಬಂದಂತಿತ್ತು
ಜೋಪಡಿಯಾಕೆಯ ಕಣ್ಮುಂದೆ
ಅನ್ನದೇಹವೆರಡೂ
ಬೇಯುವ ಕತ್ತಲ ಘಳಿಗೆ
ಉರಿದುರಿದು ಸುಸ್ತಾದ           
ಕೆಂಡದಕಿಡಿ ಬೆಳಕು

ಬೆಂದ ಅನ್ನದ ಘಾಟು
ಮೈಯ ಬೆವರಿನ ಸೊಗಡು
ಸೆರಗ ಸವರುವ ಮೊದಲು
ಬರಿ ಬೂದಿಯ ಗೌಳು
ಊದಿ ಊದಿ ನಂದಿಸಲು

ಜೋಪಡಿಹೊರಗೆ
ಗಾಳಿ ತಂಪನೆ ಬೀಸು
ಒಳಗೆಳೆದುಹೋದಂತೆ
ಅರ್ಧ ಉಸಿರಿನ ಮೌನ
ರಾಗ ಸಂಯೋಜನೆಯಲ್ಲ
ತಟ್ಟೆಗನ್ನ ಬೀಳುವ ಶಬ್ಧ
ನಗೆಮರೆತ ಚಿತ್ತಾರ
ತನ್ನೊಳಗೆ ತಾಬೆರೆತು
ಕೈತುತ್ತು ಕೊಡುತಿರಲು
ಮುಳುಗಿದ್ದ ಸೂರ್ಯ
ಚಂದ್ರ ಮೇಲೇಳಲೇ ಇಲ್ಲ

ಹಸಿದ ಕತ್ತಲೆ ತಾನು
ತನ್ನನ್ನೇ ಮರೆತಿರಲು
ಅನ್ನ ತಣಿದಿತ್ತು
ಬಿಸಿಯುಸಿರು ಬಡಿದಿರಲು
ಅರ್ಧ ಬಾಗಿಲ ತೆರೆದು
ಗಾಳಿ ತಾ ನಿಂತಿತ್ತು                                                
                                             -- 05-06-2013

Wednesday, May 8, 2013



ಅನ್ನಕದ್ದ ಮುದುಕಿ….

ಸಾಯಲು ಬಿದ್ದ ಮುದುಕಿ
ಹಸುಗೂಸಿಗಿಟ್ಟಿದ್ದ ಅನ್ನ ಕದ್ದಿದ್ದು
ಅಕ್ಕಿ ಮೇಲಿನ ಆಸೆಗಲ್ಲ
ಕೂಸೇನೂ ಆಕೆಗೆ ವೈರಿಯಲ್ಲ
ಆಕೆ ತಿಂದಿದ್ದು ಹಸಿದ ಹೊಟ್ಟೆಗಾಗಿ
ಕುಂಟುತ್ತ ನಡೆವ ಕಾಲಿಗಾಗಿ
ಬೇಡಲೊಲ್ಲದ ಎರಡು ಕೈಗಾಗಿ
ಬಗ್ಗಲಿಚ್ಛಿಸದ ಬೆಂಡು ಬೆನ್ನಿಗಾಗಿ

ಮುದುಕಿಯ ಒಂದು ದಿನ
ಕೂಸಿಗೂ ಒಂದೇ ದಿನ
ಕೂಸಿಗೆ ನಿನ್ನೆ ಬಿದ್ದ ಕನಸು
ಮುದುಕಿಯ ಕಳೆದ ಕಾಲದ ನೆನಪು
ಕೂಸು ಕಾಣಲಿದ್ದ ಜಗತ್ತು
ಮುದುಕಿ ಕಂಡಿದ್ದಕ್ಕಿಂತ ಬೇರಲ್ಲ
ಇದ್ದರಿರಬಹುದು ವ್ಯತ್ಯಾಸ
ನಗು ತುಂಬಿದ ಮುದ್ದು ಮುಖ
ನೆರಿಗೆ ಕಾಂಬ ಹಳೆಯ ಮುಖ

ನಾಳೆಗಿದೆ ಊರತೀರ್ಪು
ಅನ್ನಕದ್ದ ಮುದುಕಿಗೇನು ಶಿಕ್ಷೆ
ನೀವೇ ಹೇಳಿ, ಆಕೆಗೇನು ಶಿಕ್ಷೆ?

ಬದುಕಲಿಚ್ಛಿಸುವಿಕೆಗೆ ಯಾವ ಹಂಗಿಲ್ಲ
ಬೇಲಿ ಹಾಕಿ ಯಾರೂ ಬಂಧಿಸಿಲ್ಲ                         
ಹಸಿವ ಬದುಕ ಬೆವರ                                    



                                        -- 08-05-2013

Friday, March 15, 2013

ಕವನ


ಅಕಾಲ ಪ್ರೀತಿ

ನಾ ಕದ್ದ ಕವನದಂತೆ
ಅವರ ಪ್ರೀತಿ ಅಕಾಲದಲಿ ಮೊಳೆತಿದೆ
ಬಿಟ್ಟ ಬೇರು ಹಿಡಿದಿಟ್ಟಿದೆ
ನೆಲವ ಬಿಟ್ಟು ಬೇರಾಗದಂತೆ
ಬೇರಿಗೆ ಮತ್ತಷ್ಟು ಬೇರು ಬಿಟ್ಟು
ರೆಂಬೆಯ ಮೇಲಷ್ಟು ರೆಂಬೆ ಬೆಳೆದಿದೆ
ಕನಸಲ್ಲಿ ಕನಸು ಬಿದ್ದು
ಮನಸು ಮುರಿದ ಮನೆಯಾಗಿದೆ
ಬೆಳೆದ ರೆಂಬೆಗೆ ಮೋಡ ಕಾಣಲು
ಬಲಿತ ಬೇರಿಗೆ ನೀರು ಸಿಕ್ಕಿದೆ
ಅವರ ಪ್ರೀತಿ ಅಕಾಲದಲ್ಲಿ ಮೊಳೆತಿದ್ದು
ನಾ ಕದ್ದ ಕವನದಂತೆ
ದೇಹ ಬಾಡಿಗೆಗೆ ಸಿಗುವಂತೆ
ಕಣ್ಣಲ್ಲಿ ಕಣ್ಣಿಟ್ಟು ನೋಡದವರಿಗೆ
ಪ್ರೀತಿಯ ಕತ್ತಿಗೆ ಕುಣಿಕೆ ಬಿಗಿದು
ನೆತ್ತಿಗೆ ಮುತ್ತಿಟ್ಟು ಮುದ್ದಾಡಬಹುದೆ
ಎಲೆಯೆಲ್ಲ ಬಿರು-ಗಾಳಿಗೆ ಸಿಲುಕಿರೆ
ರೆಂಬೆ ತಾನು ನೃತ್ಯಗೈದಿದೆ
ನೆರೆಬಂದು ಮಣ್ಣೆಲ್ಲ ಕೊಚ್ಚಿಹೋದರೂ
ಬೇರು ನಿಂತ ನೀರ ಹೀರಿದೆ
ಅಕಾಲದಲ್ಲಿ ಮೊಳೆವ ಪ್ರೀತಿ
ಕದ್ದ ಕವನದಂತೆ
ಬೆಳೆದು ಮೇಲೆದ್ದರೂ ಬದುಕುವುದಿಲ್ಲ
ಬದುಕಿದರೂ ಅದು ಬದುಕಲ್ಲ


                                   ----  13-03-2013