ಮನಸಲ್ಲೇ
ಮುಳುಗುವ ಸೂರ್ಯ
ಕತ್ತಲಲ್ಲಿ ಕೂರಲು ಜ್ಞಾನವಲ್ಲ
ಕಣಾ
ಧೈರ್ಯಬೇಕು
ಹೆಣಸುಡಲು ಮಸಣವೇ ಬೇಕು
ಬೂದಿ ಹಾರಿಹೋಗಲು ಗಾಳಿಬೇಕು
ಬಾವಿಯೊಳಗಣ ಕುಬ್ಜಕಾಯ
ಹಾವು ಮೊಸಳೆಗಳ ನಡುನಡುವೆ
ಕೂತು ಕತ್ತೆತ್ತಿ ದಿಟ್ಟಿಸುವುದು
ಹತಾಶೆಯಲ್ಲ ಜಾಣಾ ಹಂಬಲ
ಹತ್ತಂತಸ್ತಿನಿಂದ ಕೆಳಗೂ ಮೇಲೂ
ನೋಡೇ ತೀರುವ ನಾನುಗಳು
ನಡುವಲ್ಲೇ ಮರೆಯಾಗುವುದೂ
ದೃಷ್ಟಿತಲುಪುವ ಮೊದಲೇ
ಭವಿಷ್ಯತ್ ಭೂತವಾಗುವುದೂ
ರೆಕ್ಕೆ ಬಿಟ್ಟ ಪುಕ್ಕದಷ್ಟೇ ಸಹಜ
ತೆಪ್ಪಗೆ ಮೈಕಳಚಿ ತಂಪಾಗಿ ತೇಲಲು
ತನುವಲ್ಲ ತಮ್ಮಾ
ಕನಸಿಗೆ ತೆರೆದಿಟ್ಟ ದಿಟ್ಟ ಮನಸು
ಬೇಕು
ಗೋಡೆಗಳ ತಂದೊಡ್ಡಿ ಮೈಮರೆತ ನಾವು
ಬಾಗಿಲಿಗೂ ಜಾಗ ಬಿಡಲಿಲ್ಲವೇ?
ಖಾಲಿ ಹಾದಿಗೆ ಹೀಗೆ ಅಣೆಕಟ್ಟು
ಕಟ್ಟಿ
ತೆನೆ ಸೊಂಪಾಗಿ ಬರಲು ಕಾಯ್ದಿರುವೆವೇ?
ಮನಸಲ್ಲೇ ಮುಳುಗುವ ಸೂರ್ಯ
ಬಳಲಿ ಬೆಂಡಾಗಲು ಒಂದಿಡೀ ದಿನವಲ್ಲ
ಮನುಜಾ ಅರೆಕ್ಷಣ ಸಾಕು!
--- 23/01/2015
No comments:
Post a Comment