Monday, July 9, 2012

ನನ್ನವೆಲ್ಲ ನನ್ನ ಮಾತ್ರದ್ದಲ್ಲ


“ನನ್ನವೆಲ್ಲ ನನ್ನ ಮಾತ್ರದ್ದಲ್ಲ”


ನನ್ನ ಕರ್ಮಠಗಳ ಗಂಟಿನ್ನೂ
ಭದ್ರವಾಗಿಯೇ ಕೂತಿದೆ
ಬೀರೂವಿನ ಮಧ್ಯಮೂಲೆಯಲ್ಲಿ
ಕೈ ಹಾಕಿ ತೆಗೆಯುವುದಿಲ್ಲ
ನನ್ನ ಸ್ವತ್ತೆಂಬ ಮಾತ್ರಕ್ಕೆ
ಎಲ್ಲ ನನ್ನದಾಗುವುದಿಲ್ಲ!

ನಾ ನೋಡಿದ್ದು, ನಾ ಕೇಳಿದ್ದು
ನನ್ನ ಮಾತ್ರದ್ದಲ್ಲ.
ನಾ ಮಾಡಿದ್ದು, ನಾ ಹೇಳಿದ್ದು
ನನಗಷ್ಟೇ ಸೇರಿಲ್ಲ.

ಅವೆಲ್ಲ ನಕ್ಷತ್ರಗಳು ಹುಟ್ಟಿ
ತಮಗರಿವಿಲ್ಲದಂತೆ ಬದುಕಿ
ತಮ್ಮಿಷ್ಟದಂತೆ ಅದೆಷ್ಟೋ ದೂರ
“ಆಹಾ! ಅದೆಂತಹ ಮಾಯಾಲೋಕ”
ಎಲ್ಲೆಲ್ಲೂ ಮಿನುಗುಮಿಂಚು
ಕಳೆದರೂ ಸಾವಿರ ಜ್ಯೋತಿರ್ವರ್ಷಗಳು
ಕಂಗೊಳಿಸುತ್ತ ಸತ್ತಮೇಲೂ ಅವುಗಳು
ಮಿರಿಮಿರಿ ಮಿನುಗುವಾಗ
ನನ್ನದೇ ಆ ಬೀರುವಿನ ಮಧ್ಯೆ
ನಾನ್ಯಾಕೆ ಕೈ ಹಾಕಲಿ? ಊಹುಂ,
ನನ್ನ ಸ್ವತ್ತೆಲ್ಲ ನನಗೆ ಮಾತ್ರ ಸೇರಿಲ್ಲ

ತಡೆಯುವುದೇ ಕಳೆವ ಕಾಲವ
ಗೋಡೆಗಂಟಿಸಿದ ಗಡಿಯಾರ
ತಿರುಗುವ ಮುಳ್ಳೆರಡು ಅನಾಮತ್ತಾಗಿ
ವೃತ್ತ ಪರಿಧಿಯ ಸುತ್ತ

ಕಂಡ ಕೆಲ ಕನಸುಗಳು
ಮನಸು ತೊಟ್ಟ ಪಾತ್ರಗಳು
ಅವೆಲ್ಲ ಹಾಗೆಯೇ ಇವೆ
ಭದ್ರವಾಗಿ ಬೀರೂವಿನ ಮಧ್ಯಮೂಲೆಯಲ್ಲಿ
ನನ್ನ ಸ್ವತ್ತೆಂಬ ಮಾತ್ರಕ್ಕೆ
ಎಲ್ಲ ನನ್ನದಾಗುವುದಿಲ್ಲ
ಬೇಕೆನಿಸಿದಾಗೆಲ್ಲ ಮನದೊಳಗೆ
ಕೈ ಹಾಕುವುದಿಲ್ಲ

ನನ್ನ ಮಾತ್ರದ್ದೇ ಈ ಕವನ
ನಾ ಬರೆದ ಮಾತ್ರಕ್ಕೆ?
ಬೇಕೆನಿಸಿದಾಗ ಮುದ್ದಿಸಿ ಮುತ್ತಿಕ್ಕಿ
ಇಲ್ಲದಿರೆ ಬೆಂಕಿಗಿಟ್ಟು ಸುಡಲು
ನಾ ಬರೆವುದೆಲ್ಲ ನನ್ನದಷ್ಟೇ ಸ್ವತ್ತೇ?

ಇಲ್ಲ, ಅವೆಲ್ಲ ಹಾಗೆಯೇ ಇರಲಿ
ಆ ಸಾಲುಗಳೆಲ್ಲ ಅಲ್ಲಿಯೇ ಇರಲಿ
ಬೀರುವಿನೊಳಗೆ ಸದ್ದಿಲ್ಲದೇ.
ಬೇಕೆಂದರೆ ಜೀವ ತಳೆದು
ತಾವಾಗಿಯೇ ಹೊರಗೆದ್ದುಬರಲಿ!

ನಾ ಬರೆದ ಸಾಲುಗಳೆಲ್ಲ ಹಾಗೆಯೇ ಇರಲಿ
ಗಂಟು ಕಟ್ಟಿಟ್ಟ ಹಾಳೆಗಳ ನಡುನಡುವೆ
ಕನವರಿಕೆಯ ಕನಸೊಳಗೆ
ತಮ್ಮಷ್ಟಕ್ಕೇ ತಾವ್ ಕಥೆಯ ಕಟ್ಟುತ್ತಾ!


******


---  [27-05-2012]