Wednesday, November 19, 2014

ಉತ್ಸಾಹಿಗಳಿಂದ ಏನೋ ಒಂದು ಪ್ರಯತ್ನ.... ನೋಡಿ - " 3 Boxes" ಹತ್ತು ನಿಮಿಷದ ಸಣ್ಣಸಿನೆಮಾ... :)
Click here to watch "3 Boxes" ... a Kannada short film..
"ಬರೆದವನನ್ನೇ ಕೆಣಕಲು ಬಂದ ಕೆಲ ಕಥೆಗಳನ್ನು ಅವುಗಳಿಗೇ ತಿಳಿಯದಂತೆ ಕಟ್ಟಿ ಕೂಡಿಹಾಕಿದ್ದೇನೆ. ಮುಂದೊಮ್ಮೆ ಅವು ತಿಳಿದು ಕೂಗಬೇಕು, ಆಗ ಕನಿಕರ ಬಂದರೆ ಬಿಚ್ಚುತ್ತೇನೆ."

Wednesday, October 22, 2014

ಇಂದು ದೀಪಾವಳಿ, ನಾಳೆ?!

ಕೇಳಲು ಸಾಧ್ಯವಾಗದಿದ್ದರೂ
ಅದು ಹಾಡ ಹೊರತು
ಬೇರಲ್ಲವೆಂಬುದು ಅರಿವಾಗುತ್ತಿದೆ
ಅದು ಕಂಗಳ ಹಾಡು
ಕಾಣದ ಸಾಲುಮನಗಳ ಕಾಡು

ಗುಬ್ಬಚ್ಚಿಯಿಲ್ಲದಿರುವಿಕೆಯಲ್ಲೂ
ಅದು ಗೂಡ ಹೊರತು
ಬೇರಲ್ಲವೆಂಬುದು ಅರಿವಾಗುತ್ತಿದೆ
ಅದು ಗಾಳಿಯ ಗೂಡು
ನಿರಾಧಾರ ಕಣಗಳ ಮಾಡು

ನಿಜ, ಇಂದು ದೀಪಾವಳಿ
ಎಲ್ಲೆಲ್ಲೂ ಬೆಳಕಿನದೇ ಹಾವಳಿ
"ಬೆಳಕೇ, ನಿನಗೆ ಆಶ್ರಯದಾತರಾರು?
ನಾನೋ, ಆ ಮಣ್ಣ ಹಣತೆಯೋ?"
ಕತ್ತಲು ಕೇಳಿದ ಪ್ರಶ್ನೆಗೆ
ಬೆಳಕೇ ಮಬ್ಬಾಗಿದೆ!

ಬೆಳಕಿನಂತೆಯೇ ಕವಿತೆ
ಕೆಳಕೆಳಗೆ ಬಂದರಂತೂ ಹಣತೆಯಂತೆ
ಕರಗಿಕರಗಿ ಮನದಮೂಲೆಯ ಸುಡುತಿದೆ
ಅಕ್ಷರಗಳು ಜಾಡುಹಿಡಿದು
ಮತ್ತದೇ ಗೂಡ ಸೇರುತಿವೆ
ಕೇಳಲಾಗದ ಹಾಡ
ಮತ್ತೆ ಮತ್ತೆ ಹಾಡುತಿವೆ
ಶಕ್ತಿಗುಂದಿಯೂ ಬಿಡದೇ ಕೆಣಕುತಿವೆ-
"ಇಂದು ದೀಪಾವಳಿ, ನಾಳೆ?!"


                           --- 28-10-2008


Wednesday, March 19, 2014

ಸ್ಥಾನಪಲ್ಲಟ




ಸ್ಥಾನಪಲ್ಲಟ


ಕಾಲಿಗೆ ಕಟ್ಟಿದ್ದ ಪಟ್ಟಿ ತೆಗೆದು
ಕಣ್ಣಿಗೆ ಕಟ್ಟಿ ಬಿಟ್ಟಿದ್ದಾರೆ
ಇಗೋ ನಿನ್ನ ಸ್ವಾತಂತ್ರ್ಯ, ನಿನ್ನಿಚ್ಛೆ
ನಿನ್ನೆ ತನಕ ನೆಲಕಚ್ಚಿ ನಿಂತಿದ್ದ ಕಾಲು
ತಳಬಿಟ್ಟು ಹಾರಿದೆ ಹೌಹಾರಿದೆ
ಕಟ್ಟಿಟ್ಟ ಕಣ್ಣಪಟ್ಟಿಗೂ
ನೆಗೆದಿಟ್ಟಿರುವ ಕಾಲ ಹೆಜ್ಜೆಗೂ
ನನ್ನೀ ಇರುವಿಕೆಯೆಂಬುದಿದೆಯಲ್ಲಅಷ್ಟೇ ಅಂತರ!

ಓಟ ಪ್ರಾರಂಭ  
ಎಲ್ಲಿಗೆ? ಎಲ್ಲೆಲ್ಲಿಗೋ
ಸ್ವಾತಂತ್ರ್ಯಕ್ಕೆ ಸತ್ಯವೊಂದೇ  ಸರಹದ್ದು
ಬಿಟ್ಟಾಗ  ಓಡಿಬಿಡಬೇಕು
ಕಾಲೆಂದಿದೆ  ನೀನೆಂದರೆ ನಾನೇ, ನಡೆ ಮುಂದೆ
ತನಗೇನೂ ಕಾಣದ ಕಣ್ಣು  ಕೇಳಿದೆ
ನೀ ಯಾರು? ನೀ ಯಾರು?”
ನಾನೆಂಬುದು ಯಾವುದೀಗ?
ಬಿಟ್ಟಿರುವ ಕಾಲೋ? ಕಟ್ಟಿರುವ ಕಣ್ಣೋ?

ಸ್ವಾತಂತ್ರ್ಯಪಟ್ಟಿ ತೆಗೆದೊಡನೆ
ಸುಟ್ಟು ಬೂದಿಯಾಗುವುದಿಲ್ಲ
ಸ್ಥಾನಪಲ್ಲಟವಾಗುತ್ತದಷ್ಟೇ
ನನ್ನದೇ ಇರಬಹುದು ಕಾಲು-ಕಣ್ಣೆರಡೂ
ಬೆಸೆಯಲಿ ಹೇಗೆ ಈಗೆಲ್ಲ
ನಾನೆಂದರೇನೆಂಬುದೇ ಪ್ರಶ್ನೆಯಾಗುಳಿದಿರುವಾಗ

ಕಳೆದ ಸ್ವಾತಂತ್ರ್ಯದ ಕಣ್ಣಹನಿ
ಕಾಲ ಸವೆದ ವೇಗದೋಟ
ನಡುವೆ ನಿಂತ ನನ್ನತನ

ಅಹೋ! ಅಹೋ!
ಕಣ್ಣಿದ್ದೂ ಕುರುಡಾದವರು ಓಟಕ್ಕಿಳಿದಿದ್ದಾರೆ
ನೆಲಕಚ್ಚಿ ನಿಂತವರೆಲ್ಲ ಸರಿದು ನಿಲ್ಲಿ!
ನಾಳೆ ನಿಮ್ಮ ಸರದಿ
ಕೊಟ್ಟಿರುವ ಪಟ್ಟಿ ಕೈಲಿ ಹಿಡಿದು ತನ್ನಿ!

                                               -- 19 -03 -2014