Sunday, October 21, 2018

ಅಸ್ತಿತ್ವ

ಭಾಗ-2: ತಪ್ಪು ಸರಿಯ ಪ್ರಶ್ನೆಯೇ ಇಲ್ಲ
ಮಳೆ ಜೋರಾಗಿ ಸುರಿಯುತ್ತಿತ್ತು. ಮಳೆಯಲ್ಲೇ ಓಡುತ್ತಿದ್ದ. ಸರಿಯಾಗಿ ಏನೂ ನೆನಪಿಲ್ಲ. ಬಾಗಿಲು ತೆಗೆದು ಹಾರಿದ್ದೊಂದೇ ನೆನಪು. 
---
ಮನೆಯಲ್ಲಿ ಜಗಳವಾಗಿತ್ತು. ಆಕೆ ಹೀಗೇ ಮುಂದುವರೆದರೆ ತಾನು ತವರು ಸೇರುವೆ ಎಂದಿದ್ದಳು. ಆಕರೆಯದೂ ಸರಿಯಾದ ವಾದವೇ. ಆತ ಅಲ್ಲಿ ದೂರದ ಬೆಂಗಳೂರಿನಲ್ಲಿ, ತಾನು ಇಲ್ಲಿ ಬೀದರಿನಲ್ಲಿ. ಮದುವೆಯಾಗಿ ಎಂಟು ತಿಂಗಳಾಯಿತು. ಎರಡೇ ಬಾರಿ ಬಂದಿದ್ದು. ಇಷ್ಟು ದೂರದ ಬೆಂಗಳೂರು ರಾಜಧಾನಿಯಾಗಲೇ ಲಾಯಕ್ಕಿಲ್ಲ ಎಂದು ಕೂಗಿದ್ದಳು ಫೋನಿನಲ್ಲೊಮ್ಮೆ. ಒಂದು ಕಡೆ ಪ್ರಯಾಣಕ್ಕೆ 13 ತಾಸು, 700 ಕಿಲೋಮೀಟರ್. ವರ್ಗಾವಣೆ ಯತ್ನದಲ್ಲಿದ್ದ. ಬೆಂಗಳೂರಲ್ಲಿ ನೌಕರಿಯೆಂದು ಬೀಗುತ್ತ ಬಂದಿದ್ದ ಹತ್ತು ವರ್ಷಗಳ ಹಿಂದೆ. ತುಂಬಾ ತುಟ್ಟಿ. ಮದುವೆಯ ನಂತರ ಈ ಪಗಾರಿನಲ್ಲಿ ಸಂಸಾರಕ್ಕೆ ಯೋಗ್ಯವಲ್ಲವೆಂದು ಚೆನ್ನಾಗಿ ಅರಿತಿದ್ದ. ಹಾಗಾಗಿ ಬೆಂಗಳೂರಿಗೆ ಸದ್ಯ ಬೇಡ, ತಾನೇ ಆ ಕಡೆ ವರ್ಗ ಮಾಡಿಕೊಂಡು ಬರುವೆ ಎಂದಿದ್ದ. ಇಲ್ಲಿ ಈತ. ಆಕೆ ಅಲ್ಲಿ.
---
ಬೆಂಗಳೂರು ಆಕೆಗೇನೋ ಹಿಡಿಸಿತ್ತು. ಬೀದರಿನ ಬಿಸಿಲಿಗಿಂತ ಇಲ್ಲೇ ಏನೋ ಹಿತ ಎನ್ನಿಸಿರಬೇಕು. ಇದೆಲ್ಲ ಮೊದಮೊದಲ ಖುಷಿ ಎಂಬುದು ಆತನ ವಾದ. ಬಿಎಂಟಿಸಿಗೆ ಮತ್ತೆ ನೂರು ವೋಲ್ವೋ ಬಂದಿಳಿದವು. ಒಂದೂ ಕೇಸ್ ಇಲ್ಲದವರನ್ನ ಆಯ್ಕೆ ಮಾಡಿ ತರಬೇತಿ ನೀಡಿದ್ದರು. ಮಾರುತಿಯೂ ಅವರಲ್ಲೊಬ್ಬ. ವೋಲ್ವೋ ಹತ್ತಿಳಿವವರ ಇಂಗ್ಲೀಷ್ ಕೇಳಿ ಕೇಳಿ ಆರು ತಿಂಗಳಲ್ಲೇ ಸ್ವಲ್ಪ ಇಂಗ್ಲೀಷ್ ಕಲಿತುಬಿಟ್ಟ. ಯೆಸ್ ನೋ ಇಂದ ಪ್ಲೀಸ್ ಕ್ವಿಕ್ಲಿ ಗೆಟ್ ಇನ್-ಸೈಡ್ ಮೇಡಮ್ ತನಕ ಬಂದುಮುಟ್ಟಿತ್ತು. ಅವರ ಸೂಟು ಬೂಟು ನೋಡಿ ತಾನೂ ಇಸ್ತ್ರಿ ಮಾಡಿದ ಬಟ್ಟೆಯನ್ನೇ ತೊಡತೊಡಗಿದ್ದ.
---
ಮೆಟ್ರೋ ಕಾಮಗಾರಿಯಿಂದ ರಸ್ತೆ ಸ್ವಲ್ಪ ಕಿರಿದಾಗಿದೆ. ಯಾವಾಗಿನಂತಲೇ ಓಡಿಸುತ್ತಿದ್ದ. ಏನಾಯಿತೋ ಗೊತ್ತಿಲ್ಲ. ಅಲ್ಲೇ ಇರಲೋ. ಇಳಿದು ಏನಾಯಿತೆಂದು ನೋಡಲೋ. ತನಗಷ್ಟು ಧೈರ್ಯ ಇದೆಯೇ? ಇದೆಲ್ಲ ಯಾವಾಗ ಯೋಚಿಸಿಬಿಟ್ಟೆ ಅವನಿಗೇ ನೆನಪಿಲ್ಲ. ಅರೆಕ್ಷಣದಲ್ಲಿ ಬಾಗಿಲು ತೆರೆದು ಹಾರಿಬಿಟ್ಟ. ಯಾವುದೋ ಗೊತ್ತಿಲ್ಲ ಗಲ್ಲಿಯಲ್ಲಿ ಗುರಿಯಿಲ್ಲದೇ ಓಡುತ್ತಿದ್ದಾನೆ. ಮಳೆ ಬೇರೆ, ಆದರೂ ಮೈತುಂಬ ಬೆವರು. ಕೈ ಕಾಲೆಲ್ಲ ನಡುಕ. ಓಡುತ್ತಲೇ ಕಿಸೆಯಿಂದ ಫೋನು ತೆಗೆದು ಆಕೆಗೆ ಫೋನಾಯಿಸಿದ "ಬೀದರಿಗೆ ಹೊರ್ಟಬಿಡು. ಉಳ್ದಿದ್ದೆಲ್ಲಾ ಕೊನೆಗ್ ಹೇಳ್ತೆನೆ"
---
ತಪ್ಪು ಸರಿಯ ಪ್ರಶ್ನೆಯೇ ಇಲ್ಲ.
--------------------------------------------------------------------------


ಭಾಗ-1: ಹೆಸರೆಲ್ಲಿಯತನಕ
ಒಂಭತ್ತಾಗಿದೆ. ಗಡಿಬಿಡಿಯಲ್ಲಿ ಹೊರಬಂದರೆ ಹತ್ತನೆ ಮಹಡಿಯಲ್ಲಿ ನಿಂತಿದ್ದ ಲಿಫ್ಟ್. ಕೊನೆ ನಿಮಿಷದ ಕೆಲಸ ಬಂದು ತಡವಾಗಿತ್ತು. ಕಾಲಿಗೇನೋ ಹಿಡಿದಂತಾಗಿ ತುಸು ತಡವರಿಸಿದ ಪಟಪಟನೆ ಮೆಟ್ಟಿಲಿಳಿಯುವ ತವಕದಲ್ಲಿ. ಅಲ್ಲೇ ನಿಂತು ಹಿಂದಿರುಗಿ ನೋಡಿದ. ಇಲ್ಲ ಏನೂ ಇಲ್ಲ. ಹಾಗೇ ಕೆಳಗಿಳಿದು ಹೊರಬಂದರೆ ಗಾಳಿ. ಜೋರು ಗಾಳಿ. ಏನೋ ಹಿತವೆನಿಸಿತು ವಿವೇಕನಿಗೆ. ಸಣ್ಣ ಮಳೆ. ತಂಪೆನಿಸುವಂತದ್ದು. ತುಸು ನಡೆದರೆ ಸಿಗುವ ನಿಲ್ದಾಣದಲ್ಲಿ ಬಸ್ಸಿಗೆ ಕಾದು ಕುಳಿತ. ಹತ್ತು ನಿಮಿಷವಾದರೂ ಬಸ್ಸಿಲ್ಲ. ನಾಡಿದ್ದು ರಜೆಯಿದೆ ನಂತರ ರವಿವಾರ ನಾಳೆಯೇ ಬಸ್ಸು ಹತ್ತಿಬಿಡಲೇ ಮನೆಕಡೆಗೆ? ವೋಲ್ವೋ ಬಂದು ನಿಂತಿತು. ಕಿಕ್ಕಿರಿದು ತುಂಬಿದ್ದ ನೋಡಿ ಹತ್ತಲಿಲ್ಲ. ನಿಂತವರು ಒಂದು ಕೈ ಮೇಲೆ ಮಾಡಿ ಕೊಕ್ಕೆ ಹಿಡಿದು ಇನ್ನೊಂದು ಕೈಯಲ್ಲಿ ಮೊಬೈಲ್ ನೋಡುತ್ತಾ ಜೋತಾಡಿಕೊಂಡಿದ್ದರೆ ಕೂತವರಲ್ಲಿ ಹೆಚ್ಚಿನವರು ತೂಕಡಿಸುತ್ತಿದ್ದರು. ಒಂಭತ್ತುವರೆಯಾಗಿಹೋಗಿದೆ.
ಇಷ್ಟೆಲ್ಲ ಹೊತ್ತು ಬಸ್ಸಿಗೆ ಕಾದ ಉದಾಹರಣೆಯೇ ಇಲ್ಲವಲ್ಲ ಎಂದು ಯೋಚಿಸುತಿದ್ದ. ಆಟೋ ಕಂಡಿತು. ಹತ್ತಿ ಕುಳಿತ. ಎಲ್ಲಿ? ಹೆಚ್ ಎ ಎಲ್ ಕ್ರಾಸ್ ತನಕ ಬಿಡಿ. ಅಲ್ಲಿಂದ ಬಸ್ಸು ಸಿಗುತ್ತದೆಯಲ್ಲ. ಆಯ್ತು ಅಂದ. ಮೀಟರ್ ತಿರುಗಿಸಿದ. ವಿವೇಕನಿಗೆ ಸಣ್ಣ ನಗು ಬಂತು. ತುರ್ತಲ್ಲಿರುವುದು ಗೊತ್ತಿದೆ. ಕೇಳಿದಷ್ಟು ಕೊಡುತ್ತಿದ್ದೆ. ಗುರೂ ಇಷ್ಟೊತ್ತಲ್ಲೂ ಮೀಟರ್ ಹಾಕಿದ್ಯಲ್ಲ? ಸುಮ್ಮನೆ ತುಸು ನಕ್ಕು ಕನ್ನಡಿಯಲ್ಲಿ ಮುಖ ನೋಡಿದ. ಯಾವೂರು? ಮಂಡ್ಯ ಸರ್ ಅಂದ. ನಿಮ್ದು? ಅಂಕೋಲಾ ಗೊತ್ತಾ ಕೇಳಿದ ವಿವೇಕ. ಹ್ಞ.. ಇಲ್ಲಾ ಸಾ ಅಂದ. ಕಾರವಾರ ಗೊತ್ತಾ ಅದರ ಹತ್ತಿರ ಅಂತ ಹೇಳಿದಾಗ ಓಹ್ ಅಲ್ಲಾ ಗೊತ್ತಾಯ್ತು ಬಿಡಿ ಅದೇ ಉಡುಪಿ ಹತ್ರ ಅಲ್ವಾ? ತಲೆಯಾಡಿಸಿ ವಿವೇಕ ಸುಮ್ಮನಾದ. ಕೆಲ ಹೊತ್ತು ಮೌನ.
ಸಾರ್ ಎರಡ್ ರೀತಿ ಸಂಪಾದಿಸ್ಬಹದು ಸಾರ್. ಅಂದ್ರೆ. ಮೀಟರ್ ಹಾಕ್ದೇನೂ ಓಡಿಸಬಹುದು ಹಾಕೂ ಓಡಿಸ್ಬಹುದು. ವಿವೇಕ ಇನ್ನೇನ್ ಕೇಳ್ಬೇಕೂ ಅಂತಿರೋವಾಗ 'ಸಾರ್ ನಾನ್ ಯಾಕ್ ಮೀಟರ್ ಹಾಕ್ದೇ ಅಂತಾ ಕೇಳ್ಬೇಡಿ ಈಗ' ಅಂತ ದೊಡ್ದದಾಗಿ ನಕ್ಬಿಟ್ಟ. ಮಳೆ ಜೋರಾಯಿತು. ಲೇಟ್ ಆಗೋಯ್ತು ಸಾರ್. ಹ್ಙಂ ಹೌದು ನಂಗೂ ಲೇಟಾಗೋಯ್ತು. ಸಾರ್ ಲಾಸ್ಟ್ ರೈಡ್ ಅಲ್ವಾ ಅದಿಕ್ಕೆ ಮೀಟರ್ ಹಾಕ್ಬಿಟ್ಟೆ ಅವನಾಗೇ ಅಂದ. ಮತ್ತೆ ಕನ್ನಡಿಯಲ್ಲಿ ನೋಡಿ ತುಸು ನಕ್ಕ. ಉತ್ತರಕ್ಕೆ ವಿವೇಕನೂ ತುಸು ನಕ್ಕ. ಪಕ್ಕದ ಕಾರ್ ನವನು ಹೊಂಡಕ್ಕೆ ಚಕ್ರಹಾಯಿಸಿ ಸಿಡಿದ ಕೆಸರು ನೀರು ಬಂದು ವಿವೇಕನ ಪ್ಯಾಂಟಿಗೆ ಬಡಿಯಿತು. ಊರಿಗೆಂದು ಬಸ್ ಟಿಕೆಟ್ ಬುಕ್ ಮಾಡುತಿದ್ದ ಮೊಬೈಲ್ ಸ್ಕ್ರೀನಿಗೂ ನೀರು ತಗುಲಿ ಒರೆಸಲೆಂದು ಕೈತಾಗಿಸಿ ಏನೇನೋ ಆಗಿ ಬುಕಿಂಗ್ ಪೂರ್ಣ ಆಗಲಿಲ್ಲ. ಏನೋ ಕರೆಂಟ್ ಹೋಗಿ ಬಂದಂತಾಯಿತು ವಿವೇಕನಿಗೆ. ಪೂರ್ಣ ಕತ್ತಲು ತದನಂತರ ಒಮ್ಮೆಲೆ ಬೆಳಕು.
ಸಾರ್ ಈಗೆಲ್ಲಿ ಹೋಗೋಣಾ?
ಇನ್ನೇನು?
ಸಮಯದ ಅರಿವೂ ಇನ್ನಿಲ್ಲ
ಭಾರವೆನಿಸುವ ಯಾವ ಅನುಭವವೇ ಇಲ್ಲ
ಈಗಷ್ಟೇ ಇದ್ದ ಮಿಜಿಮಿಜಿ ಟ್ರಾಫಿಕ್ ಎಲ್ಲಿ?
ಎಲ್ಲ ಖಾಲಿ ಖಾಲಿಯಿದೆಯಲ್ಲ ಇಲ್ಲಿ
ಸಾರ್ ಅಂದಹಾಗೆ ನಿಮ್ ಹೆಸ್ರೇನು?
ತೆರೆದೇ ಇದ್ದ ರೆಪ್ಪೆಯೊಳಗಿನ ಕಣ್ಣ
ಮಿಸುಕಾಡುವ ಯತ್ನದಲ್ಲಿದ್ದ ವಿವೇಕನಿಗೆ
ತನ್ನ ಹೆಸರೇ ನೆನಪಾಗಲಿಲ್ಲ
ಕೆಲ ಸಮಯದ ನಂತರ
ತಾನೂ ನಸುನಕ್ಕ ಮತ್ತೆ ಹೇಳಿದ-
ಎಲ್ಲಾದರೂ ಸರಿ ಗುರೂ
ಇನ್ನೇನು?
ಹೋಗುತ್ತಲಿರೋಣ
-------------------------------------------------------------------------------------------
(July 28 & Oct 2, 2018)