Saturday, October 12, 2013

ಎರಡೇ ಎರಡು ಹೆಜ್ಜೆ!

ಎರಡೇ ಎರಡು ಹೆಜ್ಜೆ ! 

ಕೆಂಬಣ್ಣ ಬಳಿದಿದೆ
ನೀನೆಂಬ ನಗುತಿರುವ
ಬರಿಯ ಭಾವಚಿತ್ರಕ್ಕೆ
ಹೀಗೆಯೇ ಕತ್ತೆತ್ತಿ ನೋಡಲು
ನಿನ್ನೆ ಕಂಡ ನಕ್ಷತ್ರ ಇಂದಿಲ್ಲ!

ನೀ ಕಾಂಬ ಭಾವಚಿತ್ರವೋ
ಜಗವರಿಯದ ಬಯಕೆಗಳ ಗುಚ್ಚ
ಗೂಡ ತೊರೆದು ದೂರ
ಹಾರಿದ ಹಕ್ಕಿ

ನೀನಿಟ್ಟ ಹೆಜ್ಜೆಯಲ್ಲ
ಪಯಣಿಸಿದ ದಾರಿ
ಕಟ್ಟಿಟ್ಟ ಬುತ್ತಿಯಲ್ಲ
ನಡೆದುಬಂದ ರೀತಿ
ಕೊಟ್ಟ ಮಾತಲ್ಲ
ಪಟ್ಟ ಪರಿಶ್ರಮ
ಬಿಟ್ಟ ಬಯಕೆಯಲ್ಲ
ನೆಟ್ಟ ನೆನಪಿನ ಗಿಡ

ರಾತ್ರಿಯೆಂಬ ಮಾಯೆ
ಹಗಲಾಗಲಿ ಕಳೆದು
ತಿಳಿದೋ ತಿಳಿಯದೆಯೋ
ಮತ್ತೆ ಸಾವಿರ ಜನ
ಹುಟ್ಟುತ್ತ ಬದುಕಾಗಿ
ಬದುಕೆಲ್ಲ ನೆಪವಾಗಿ

ನೀನೇ ಹೇಳು
ಹಚ್ಚಿದವ ಹುಚ್ಚ
ದೀಪಕ್ಕೇನು ಬೆಳಗಲು?
ನೆಟ್ಟವ ಕಳ್ಳ
ಗಂಧದ ಗಿಡಕ್ಕೇನು ಬೆಳೆಯಲು
ಸಂಬಂಧವಿಷ್ಟೇ ಕರ್ತೃ-ಕಾರಣ

ಇಡಬಾರದಿತ್ತೇ ಇನ್ನೇರಡೇ
ಹೆಜ್ಜೆ ನೀ ಹಿಂದಕ್ಕೆ
ಮೆಟ್ಟಿ ನಿಲ್ಲಲು
ಬಿಟ್ಟು ನಡೆದಿದ್ದ ಚಪ್ಪಲಿಯ ಮತ್ತೆ?

ಬಂದುನೋಡು ಇಂದು
ಬಣ್ಣ ಬಳಿದ ಭಾವಚಿತ್ರಕ್ಕೂ
ನೀ ಬಿಟ್ಟುಹೋದ ಜೊತೆ
ಚಪ್ಪಲಿಗೂ ಅಂತರವೆಷ್ಟೆಂದು

ಎರಡೇ ಎರಡು ಹೆಜ್ಜೆ!
                                          
                                                                               
                                                                   -- 12-10-2013

{ಅರ್ಪಣೆ:  ಪ್ರತಿಭಾವಂತ ಕವಿ-ಕಾದಂಬರಿಕಾರ-ಲೇಖಕ ದಿ|| ಗ.ಸು.ಭಟ್ಟ ಬೆತ್ತಗೇರಿ}