Sunday, October 29, 2017

ಶಕ್ತಿ

ಹತ್ತು ಹೂವ ಕಿತ್ತು
ಆಚೆ ಕಾಲನೆತ್ತಿಡಲು
ಕಚ್ಚಿತೊಂದು ಮುಳ್ಳು
ಸಿಟ್ಟಲ್ಲಿ ಶಪಿಸಲಾಯಿತು
ಮತ್ತೆ ನಾಳೆ ಬರಲು
ಅದೇ ಹೂವ ಕೀಳಲು
ಕನಸು ಕಂಡ ರಾತ್ರಿ
ಬೆಳಗಾಗಿ ಕಣ್ಬಿಡಲು
ಕಟ್ಟೆಯೊಡೆಯಿತು ಕನವರಿಕೆ
ಜಾರಿಹೋದ ಅನುಭವ
ಸುಳ್ಳು ಸತ್ಯಗಳ ನಡುವೆ
ವಸ್ತುವದೊಂದಕ್ಕೆ ತಾನು
ಕದಲದಿರಲು ಬೇಕು
ಅದೇನೋ ಶಕ್ತಿ
ನಾನು ನಾನಾಗಿಯೇ
ಇರಲೂ ಕೂಡ
ಭಾವಕ್ಕೆ ಅದಾಗಲೇ
ಬಣ್ಣ ಬಡಿದಿದ್ದೇನೆ
ನೋಡುವ ಕಂಗಳಾದರೂ
ಮುಸಿನಗಲೆಂದು
ಒಳಗಿನ ಬಣ್ಣಕ್ಕೆ ಬೆಲೆ ಕಡಿಮೆ
ಎಟುಕುವುದೇ ಸತ್ಯ ಸುಲಭಕ್ಕೆ
ಗಾಳಿಗೆ ಬಿದ್ದ ಈ ಹಗುರ
ಆಸೆಯ ತುಂಡುಗಳು
ಅದೆಲ್ಲೋ ಸಾಗಿವೆ
ನಿನ್ನೆ ನಾಳೆಗಳ ನಡುವೆ
ನೆಲ ತಲುಪಲೊಲ್ಲದೇ
ತೆರೆದ ಮುಗಿಲ ಕಡೆಗೆ


-- 29-Oct-2017

Saturday, September 16, 2017

ಈ ನಗರ

ಬರೀ ತೇಲುವಿಕೆಯಲ್ಲಿ
ತೊಡಗುತ್ತೇನೆ ಆಗಾಗ
ಬರೀ ತೇಲುವಿಕೆ
ನಿರ್ಭಾವುಕ ನಿರ್ಲಿಪ್ತ
ನಿರಾತಂಕ ನಿರಾಕಾರ
ತೆರೆದ ಕಿಟಕಿಯಾಚೆಗಿಂದ
ಬರುವ ಈ ನಿಲ್ಲದ
ಮಹಾನಗರದ ಶಬ್ಧಗಳಷ್ಟೇ
ಮೊದಮೊದಲು
ಕೊನೆಕೊನೆಗೆ ಯೋಚನೆಗಳೇ
ನಿಲ್ಲತೊಡಗುತ್ತವೆ ನೂರಾರು
ಚಿತ್ರಗಳು ಚಿತ್ತದಲ್ಲಿ ಬಿಚ್ಚಿಡಲು
ಮೊದಲ ಪ್ರಾಶಸ್ತ್ಯ
ತನಗೆಂದೇ ವಾದಿಸಲು
ಕಛೇರಿಯ ಏಸಿ ಶಬ್ಧ
ಶೆಹನಾಯಿಯಾಗುತ್ತಿದೆ
ಎಲ್ಲ ಬದಿಗಿಟ್ಟು ಇನ್ನೇನು
ಕಣ್ಮುಚ್ಚಿ ಕುಳಿತರೆ ಮನಸಲ್ಲಿ
ಹಗಲು ರಾತ್ರಿಯಾಗುತ್ತಿದೆ
ಮೋಡ ಸೀಳಿ ಭೋರ್ಗರೆವ ಮಳೆ
ನರನಾಡಿ ಹೊಕ್ಕು ಹುಚ್ಚೆಬ್ಬಿಸಿದೆ
ಮತ್ತೆ ಬೇಕು ಈ ತೇಲುವಿಕೆ
ಇನ್ನೂ ಬೇಕೆಂದು ಚಡಪಡಿಸುವಾಗ
ಸಟ್ಟನೆ ಎಚ್ಚರವಾಗುತ್ತದೆ
ರವಿವಾರ ಕಳೆದು ಸೋಮವಾರ
ಕಣ್ಣುಜ್ಜಿ ಕಿಟಕಿಯಿಂದಾಚೆ
ಕಣ್ಣಾಯಿಸಿದರೆ
ಈ ನಗರವಿನ್ನೂ ತೇಲುತ್ತಲೇ ಇದೆ
ಬರೀ ತೇಲುವಿಕೆ
ನಿರ್ಭಾವುಕ ನಿರ್ಲಿಪ್ತ
ನಿರಾತಂಕ ನಿರಾಕಾರ
ನಿನ್ನೆಗಳ ಅದೆಲ್ಲೋ ಬಿಚ್ಚಿಟ್ಟು ಬಂದ
ನಾನು ನಗರ
ನಗರ ನಾನು

(17-09-2017)



Saturday, July 8, 2017

ಇದು ಕೊನೆಯಲ್ಲ

ನೀನೆಂಬ ಬಯಕೆ ನನ್ನೀ ಹರಿವಿನ ಒಳಗೆ ಮೊಳಕೆಯೊಡೆಯುವ ಮೊದಲೇ ಚಿವುಟಿಬಿಡಲೇ? ಏಕೆ ಹೇಳು? ಮೋಡ ಬಂದು ಮರೆಯಾಗುವ ಬದಲು ಬರದಿರುವುದೇ ಒಳಿತು. ಮೇಲಾಗಿ ಜತನದಿಂದ ಕಾಪಿಟ್ಟ ಮನಸಲ್ಲ ಇದು, ಒಡೆದುಹೋಗುವುದು ಎರಡೇ ಎರಡು ಕಣ್ಣಹನಿ ಬಿದ್ದರೂ. ರಭಸಕ್ಕೆ ಬಾಗದ ಬಗೆಯನ್ನೂ ಕಲಿಸಿಲ್ಲ ಇದಕೆ, ನಿನ್ನುಸಿರ ಗಾಳಿಗೆ ಹಾಗೇ ಹಾರಿಹೋದೀತು! ಗೊತ್ತಿದೆ ನಾಳೆಯೆಂಬುದಿದೆ ಇಂದು ಕಳೆದರೆ, ಕಾಯುವೆ ಕಣ್ಮುಚ್ಚಿ. ಕಲಿಸುವೆ ಕಸರತ್ತ ಮನಕೆ, ಚಿಗುರ ಚೂಟುವ ಕೆಲಸ ಸುಲಭದ್ದಲ್ಲ ನೋಡು! ಬೇಕೆಂದು ಮಾಡುವುದಲ್ಲ, ಸಹಜ ಸ್ವಾರ್ಥವೆಂದುಕೋ ಮತ್ತು ಅಗತ್ಯ. ಕವನವಿದು, ಕಟ್ಟು ಕಥೆಯಲ್ಲ, ಕವನ. ಅಳುಕು, ಪ್ರತೀ ಸಾಲಿನ ತುದಿಗೆ ನಿಂತ ನೀನು ಹಾಗೇ ಜಾರಿಹೋಗದಿರಲೆಂದು ಜಾಗ ಬಿಡದೇ ಬರೆದಿರುವೆ ಅಷ್ಟೇ. ಕಡೆಯ ಸಾಲಿನ ಕೊನೆಯಿದು. ಇದೇ ಕೊನೆ. ನಾ ಬೇರೆ ನೀ ಬೇರೆ.

(July 1st 2017)

Wednesday, June 14, 2017

ನಾ ಮಾತ್ರ ಬದಲಾದೆ!

ನನಗೆ ಇಷ್ಟೇ ಇಷ್ಟು
ಚೂರು ಸಾಕು ಎಂಬ
ಮನದ ಖಯಾಲಿ
ಬಚ್ಚಲ ಮನೆಯ ಹಂಡೆ-
ನೀರು ಬಿಸಿಯಾಗುವ
ಮೊದಲೇ ಬೆಂಕಿನಂದಿಸಿ
ಮರೆಯಾಗಿಹೋಗಿತ್ತು
ನಿನ್ನೆ ರಾತ್ರಿ ಮಾತ್ರ ಹೊಯ್ದ
ಮಳೆ ಮನೆಯಂಗಳದ
ತುಳಸೀಗಿಡದ ಬೇರಿಗೆ ಒಂದೇ-
ಒಂದು ಹನಿ ಮುಟ್ಟಿಸುವ
ಮೊದಲೇ ಘಳಿಗೆ
ಬೀಸಿದ ಗಾಳಿಗೆ
ಗಿಡ ಕಿತ್ತು ನೆಲಕ್ಕೂರಿತ್ತು.
ಹಗಲೆಲ್ಲ ಹೆಣಗಾಡಿ ಹಾರುತ್ತ
ಕೆಂಪು ಸೂರ್ಯನ ಪಕ್ಕ
ಹಕ್ಕಿ ಹೆಕ್ಕಿ ತುತ್ತ ಜೊತೆಗೆ
ತವರ ಸೇರುವ ಮೊದಲೇ
ಇದ್ದ ಮೂರು ಮರಿಗಳಲ್ಲಿ
ಒಂದು ಹಸಿದ ಹೊಟ್ಟೆ ಬಿರಿದು
ಸ್ರಾವ ಸೋರಿತ್ತು
ಮತ್ತೆರಡು ಮಾಯವಾಗಿತ್ತು
ಇಷ್ಟೇ ಇಷ್ಟು ಚೂರು ಸಾಕು
ಎಂಬ ಸಂಯಮ
ಸತ್ತು ಮತ್ತೆ ಹುಟ್ಟಿ
ನೆಲವ ತಟ್ಟಿ ನಡೆವ ಮೊದಲೇ
ಮತ್ತೆ ಮತ್ತೆ ಬೇಕು
ಹೆಚ್ಚು ಹೆಚ್ಚು ಬೇಕು ಎಂಬ
ತವಕ ಮನೆಯಮಾಡಿತ್ತು
ಅದೇ ಹಳೆಯ
ಬಚ್ಚಲುಮನೆಯ ಪಕ್ಕ
ಅದೇ ತುಳಸೀಗಿಡದ
ಮುರಿದ ಕೊಂಬೆಯ ಕಡ್ಡಿ
ಹಿಡಿದು ಅದೇ ಹಕ್ಕಿ
ಗೂಡ ಬುಡವ ಗಟ್ಟಿಮಾಡಲು
ಹಾರಿಹೋಯಿತು
ನನಗೂ ಗಿಡಕ್ಕೂ ಹಕ್ಕಿಗೂ
ಬಚ್ಚಲುಮನೆಗೂ ಈಗ
ವರ್ಷ ಸಾವಿರವಾಯಿತು


(14-06-2017)

Sunday, May 7, 2017

ಹೆಸರಿಲ್ಲದವರು // ಕವನ

ಹೆಸರಿಲ್ಲದವರು

ಇಲ್ಲಿ ಹೆಸರಿಲ್ಲದವರೇ ಬರುತ್ತಾರೆ
ಅಥವಾ ಬಂದ ಮೇಲೆ
ಹೆಸರ ಬದಲಾಯಿಸುತ್ತಾರೆ
ಹೆಸರಿಗೇನು ಕಡಿಮೆಯೇ
ಬೆಲೆಯೆಂತದು ಹೆಸರಿಗೆ

ಏನು ನಿನ್ನ ಹೆಸರು? ಕೇಳಿದರೆ
ಊಟದಂಗಡಿಯಂತೆ ಉದ್ದುದ್ದ
ಪಟ್ಟಿ ಕಣ್ಣೆದುರಿಗೆ ಹಿಡಿದು
'ಆಯ್ಕೆ ನಿಮ್ಮದೇ' ಎನ್ನುತ್ತಾರೆ

ಆಗಾಗ್ಗ ಮಳೆ ಬಿದ್ದರೂ
ತಂಪಾಗದವರು
ಮಳೆಯನ್ನೇ ತಿಳಿಯದವರೂ
ಕೆಂಡ ನುಂಗುವವರೂ ಇತ್ಯಾದಿ
ಇಲ್ಲಿಗೇ ಬಂದು ಮೀಯುತ್ತಾರೆ
ಹೆಸರ ಕಳಚಿಟ್ಟು ಮೀ-
ಯುವುದರಲ್ಲೇನೋ ಸುಖ

ದಣಿವಿಗೆಲ್ಲ ಹೆದರದ ಇವರು
ಇಲ್ಲಿ ಜಾತ್ಯಾತೀತತೆ ಮೆರೆಯುತ್ತಾರೆ
ಜಾತಿ-ಧರುಮವೆಲ್ಲ  ಮನೆಯೊಳಗೆ
ಏನೋ ಒಂದು ಹೆಸರು ಬಿಡಿ
ಯಾವುದೋ ಒಂದು ಧರುಮ
ಅದಕೆಲ್ಲ ಇಲ್ಲಿ  ಎಲ್ಲಿ ಸಮಯ?

ಗಾಳಿಗೆಲ್ಲ ಮೈಯೊಡ್ಡಿ
ಅಂಗೈ ಹಿಸುಕಿ
ತಾಪ ಅಳೆಯುವ ಇವರಿಗೆ
ಒಂದೇ ಒಂದು ಚಿಂತೆ
ನಾಳೆ ಬೆಳಗಾದರೆ ತನಗೆ
ಮತ್ತದೇ ಹೆಸರೇ?

ದೇವ ಬಳಿ ಬಂದರೆ ಇವರೆಲ್ಲ
ಪ್ರತಿದಿನ ಹುಟ್ಟಿ-ಸಾಯುವ
ವರವನ್ನೇ ಕೇಳುತ್ತಾರೆ
ಇಟ್ಟ ಹೆಸರೇ ಇವರಾಗಿ ಹೋಗಿರಲು
ಹೊಸದಾಗಿ ಬಾಳಿ ಬದುಕಲು
ಬೇರೆ ಮಾರ್ಗ ಇದೆಯೇ?

(07-May-2017)

Wednesday, March 8, 2017

ಆರದ ದೀಪ


ನಿಂತುಬಿಟ್ಟ
ಎಲ್ಲಿ ಏಕೆ ಹೇಗೆ ನೆನಪಿಲ್ಲ
ಬಿದ್ದ ಮಳೆಗೆ ಬೇರು
ತಂಪಾಗಿಹೋಯಿತಿರಬೇಕು
ಸೇವಿಸಿರಬೇಕು ದೇಹ
ಸಾಕಷ್ಟು ಗಾಳಿ
ಅನಿಸಿರಬೇಕು
ಮತ್ತೇಕೆ ಇನ್ನೇಕೆ
ನಿಂತುಬಿಟ್ಟ
ಕತ್ತೆತ್ತಿ ಹೇಳಿದ್ದ ಅಂದೇ
‘ಲೇಖನಿಗಿನ್ನೆಷ್ಟು ತುಂಬಲಿ ಶಾಯಿ
ಮುಖಕಿನ್ನೆಷ್ಟು ಬಳಿಯಲಿ ಬಣ್ಣ
ನೋಯ್ದಿದೆ ಮನವೆಲ್ಲ
ಇನ್ನೆಷ್ಟು ಕಣ್ಣರಳಿಸಿ ನೋಡಲಿ ನಾ’
ಸುತ್ತಿರುವ ವೃತ್ತಪರಿಧಿಯ ಸುತ್ತ
ಹಿಂದೆಯೂ ಮುಂದೆಯೂ
ಎಡಕ್ಕೂ ಬಲಕ್ಕೂ ಚಲಿಸದೇ
ನಿಂತುಬಿಟ್ಟ ಹಾಗೇ
ತಿರುಗೇ ತಿರುಗುವ
ಭೂಮಿಯ ಮೇಲೆ
ಸವೆದ ಹೆಜ್ಜೆಗೇನು ಬೆಲೆ
ಅಕಾರಣ ಇನ್ನೆಷ್ಟು ನಡೆಯಲಿ
ಎಂದೋ ಏನೋ
ನಿಂತಲ್ಲೇ ಕಣ್ಮುಚ್ಚಿ ಕುಸಿದುಹೋದ
ಲೇಖನಿಯ ಮುಚ್ಚಳಿಕೆಯಿನ್ನೂ
ತೆರೆದಿರುವಾಗಲೇ

(08-03-2017)

Friday, January 6, 2017

ಸುಲಭದ ಲೆಕ್ಕ

 ಸುಲಭದ ಲೆಕ್ಕ
 
ನಾನು ಏಕಗತಿಯ ದ್ವೇಷಿಸುವವ
ನಾಲ್ಕೂ ದಿಕ್ಕಿಗೆ ಬಾಣ ಬಿಡಲು ಹಾತೊರೆಯುವವ
ಅದೂ ಒಟ್ಟೊಟ್ಟಿಗೇ
ನಗುವವ
ಅಳಲು ಬಯಸದವ
ಮೆರೆಯುವವ
ಮರೆಯುವವ
ನಿನ್ನೆ ಇಂದು ಮತ್ತೆ ನಾಳೆಯ

ಹಾಗೂ
ನಾನು ಸೋಲಲೊಲ್ಲದವ
ತಲೆ ಮೇಲಿನ ಸೂರ್ಯಗೇ ಸವಾಲೆಸೆಯುವವ
ಬೆಳೆಯುವವ
ಬೀಗುವವ
ಕುಗ್ಗಿಸಿ ಕುಣಿಯುವವ

ನಾನು
ತಾನು ಮಾತ್ರ ನಾನೆಂದು ನಂಬಿದವ
ಒಳಗೊಳಗೇ
ಕುದಿಯುವವ
ಕದಿಯುವವ
ಲಾಸ್ಯಕ್ಕೆ ಒಗ್ಗುವವ
ದಾಸ್ಯಕ್ಕೆ ದಣಿಯದವ

ನಾನು
ಅಂಕಗಣಿತದ ಮೊದಲ ಪುಟದ ಲೆಕ್ಕ
ಬಿಡಿಸಲು ತೀರಾ ಸುಲಭದವ
ನಿನ್ನೆ ಹುಟ್ಟಿ
ಒಂದೇ ದಿನ ಬದುಕಿದವ

ಕನ್ನಡಿ ಮುಂದೆ ನಿಂತು
ಅವಳೋ ಅವನೋ ಆಗಬಯಸುವ
ನಾನು
ಅಂತೂ ಕೊನೆಯ ಸಾಲು ತಲುಪಿರುವ ನೀವೇ

-- 06-01-2017