Saturday, December 14, 2013

ಕವನನಾ ನೀನಲ್ಲದ ಕಾರಣ
ನೀ ನಾನಾಗಬೇಕೆಂಬ
ಯಾವ ಹಂಬಲವೂ ಇಲ್ಲ
ಎಡಬಿಡಂಗಿ ಕನಸುಗಳ
ಹಠಾತ್ ಮರಣಕ್ಕೆ
ನೀ ಸಾಕ್ಷಿಯಷ್ಟೇ, ಕಾರಣವಲ್ಲ!

ಗೊಂಚಲು ಮನಸುಗಳ
ಎರವಲು ಕೊಂಡಿ
ಇಂದು ನಿನ್ನೆಯದಲ್ಲ
ಅದಕ್ಕೂ ಇತಿಹಾಸವಿದೆ
ಕಂಪಿಸಿದ್ದಷ್ಟೇ ಗೊತ್ತು ಉಸಿರು
ನೀನಿಟ್ಟ ಪ್ರಶ್ನೆ ಪ್ರಶ್ನೆಯಷ್ಟೇ
ಅದೇ ಕೊನೆಯಲ್ಲ!

ನೀನೂ ಒಮ್ಮೆ ಹಾಗೇ
ಕತ್ತೆತ್ತಿ ಯೋಚಿಸಿನೋಡು
ಆಕಾಶ ಅದೆಷ್ಟು ಸುಳ್ಳೆಂದು
ಉತ್ತರ ಸಿಕ್ಕರೂ ಸಿಗಬಹುದು
ನಾ ಸುಮ್ಮನಿದ್ದ ಪ್ರಶ್ನೆಗೆ

ಕಾರಣ ಬೇಕೇ
ಸಮಯಾಂತರ ಸರಿದಾಡಲು
ತುಡಿತವೇ ಹಾಗೆ
ಸರಿದು ನಿಲ್ಲುವುದಿಲ್ಲ
ನಾ ನೀನಾಗಬೇಕೆಂಬ ತುಮುಲ
ಸಾಧ್ಯವಿಲ್ಲದ ಪ್ರತಿಕ್ಷಣ

ನೀ ನಾನಾಗಲಿಲ್ಲವೆಂಬ
ಯಾವ ಬೇಸರವೂ ಇಲ್ಲ
ಬಂದುಬಿಡು ತಿರುಗಿ ಬೇಕೆನಿಸಿದಾಗ
ನಿನ್ನಿಚ್ಛೆಯಂತೆಯೇ ಆಗಲಿ
ಸೋತ ಪ್ರಶ್ನೆಗಳ ಹಿಸುಕಿ ತೆಗೆದು
ಮತ್ತೆ ಉತ್ತರ ಹುಡುಕೋಣ
ಸ್ವಚ್ಛಂದ ತಿರುಗಿರುವ
ನಾಳೆಗಳ ಬಲವಂತ ಹಿಡಿದು
ಮತ್ತೆ ಕನಸಕಟ್ಟೋಣ.

**** 
                                                          -- [14-12-2013]

Saturday, October 12, 2013

ಎರಡೇ ಎರಡು ಹೆಜ್ಜೆ!

ಎರಡೇ ಎರಡು ಹೆಜ್ಜೆ ! 

ಕೆಂಬಣ್ಣ ಬಳಿದಿದೆ
ನೀನೆಂಬ ನಗುತಿರುವ
ಬರಿಯ ಭಾವಚಿತ್ರಕ್ಕೆ
ಹೀಗೆಯೇ ಕತ್ತೆತ್ತಿ ನೋಡಲು
ನಿನ್ನೆ ಕಂಡ ನಕ್ಷತ್ರ ಇಂದಿಲ್ಲ!

ನೀ ಕಾಂಬ ಭಾವಚಿತ್ರವೋ
ಜಗವರಿಯದ ಬಯಕೆಗಳ ಗುಚ್ಚ
ಗೂಡ ತೊರೆದು ದೂರ
ಹಾರಿದ ಹಕ್ಕಿ

ನೀನಿಟ್ಟ ಹೆಜ್ಜೆಯಲ್ಲ
ಪಯಣಿಸಿದ ದಾರಿ
ಕಟ್ಟಿಟ್ಟ ಬುತ್ತಿಯಲ್ಲ
ನಡೆದುಬಂದ ರೀತಿ
ಕೊಟ್ಟ ಮಾತಲ್ಲ
ಪಟ್ಟ ಪರಿಶ್ರಮ
ಬಿಟ್ಟ ಬಯಕೆಯಲ್ಲ
ನೆಟ್ಟ ನೆನಪಿನ ಗಿಡ

ರಾತ್ರಿಯೆಂಬ ಮಾಯೆ
ಹಗಲಾಗಲಿ ಕಳೆದು
ತಿಳಿದೋ ತಿಳಿಯದೆಯೋ
ಮತ್ತೆ ಸಾವಿರ ಜನ
ಹುಟ್ಟುತ್ತ ಬದುಕಾಗಿ
ಬದುಕೆಲ್ಲ ನೆಪವಾಗಿ

ನೀನೇ ಹೇಳು
ಹಚ್ಚಿದವ ಹುಚ್ಚ
ದೀಪಕ್ಕೇನು ಬೆಳಗಲು?
ನೆಟ್ಟವ ಕಳ್ಳ
ಗಂಧದ ಗಿಡಕ್ಕೇನು ಬೆಳೆಯಲು
ಸಂಬಂಧವಿಷ್ಟೇ ಕರ್ತೃ-ಕಾರಣ

ಇಡಬಾರದಿತ್ತೇ ಇನ್ನೇರಡೇ
ಹೆಜ್ಜೆ ನೀ ಹಿಂದಕ್ಕೆ
ಮೆಟ್ಟಿ ನಿಲ್ಲಲು
ಬಿಟ್ಟು ನಡೆದಿದ್ದ ಚಪ್ಪಲಿಯ ಮತ್ತೆ?

ಬಂದುನೋಡು ಇಂದು
ಬಣ್ಣ ಬಳಿದ ಭಾವಚಿತ್ರಕ್ಕೂ
ನೀ ಬಿಟ್ಟುಹೋದ ಜೊತೆ
ಚಪ್ಪಲಿಗೂ ಅಂತರವೆಷ್ಟೆಂದು

ಎರಡೇ ಎರಡು ಹೆಜ್ಜೆ!
                                          
                                                                               
                                                                   -- 12-10-2013

{ಅರ್ಪಣೆ:  ಪ್ರತಿಭಾವಂತ ಕವಿ-ಕಾದಂಬರಿಕಾರ-ಲೇಖಕ ದಿ|| ಗ.ಸು.ಭಟ್ಟ ಬೆತ್ತಗೇರಿ}

Monday, July 1, 2013

ಕವನ

 

ನೀ ನೀನಾಗಿಬಿಡು! 
ನಿನ್ನೆಯ ರೋಚಕ ಕಥೆಯಲ್ಲ
ನಾಳೆಗೆ ಭಾರೀ ಸುದ್ದಿಯಲ್ಲ
ಇಂತಿಪ್ಪ ಇಂದಿಗೆ ತುಡಿವ ಬದುಕಾಗಿಬಿಡು

ಮಳೆಗೆ ನಿಂತ ನೀರಲ್ಲ
ಕಣ್ಗೆ ನಿಲುಕದ ಕಡಲಲ್ಲ
ಬಿಡದೆ ಹರಿವ ಸತತ ಝರಿಯಾಗಿಬಿಡು

ಪುಟ ಮುಗಿಯದ ಕಾದಂಬರಿಯಲ್ಲ
ಬರೆದಿಟ್ಟ ಗೋಡೆ ಗಾದೆಯಲ್ಲ  
ಕೇಳಲೊಮ್ಮೆ ಮರೆಯದ ಸಣ್ಣ ಹಾಡಾಗಿಬಿಡು

ದೂರದ ನುಣ್ಣನೆ ಬೆಟ್ಟವಲ್ಲ
ಕಾಲ್ತೆಳಗೆ ಕಲೆವ ಕಳೆಯಲ್ಲ
ಬಿತ್ತಿದರೆ ತೆನೆಬಿಡುವ ಭತ್ತದ ಬೆಳೆಯಾಗಿಬಿಡು      

ಕಣ್ತೆರೆದೆ ಕಾಣುವ ಹಗಲುಗನಸಲ್ಲ
ಕಣ್ಮುಚ್ಚಲು ಕಾಡುವ ಬಚ್ಚಿಟ್ಟ ಬಯಕೆಯಲ್ಲ
ಕಾಣದೆಯೆ ಸೆಳೆವ ಪರಿಪಕ್ವ ಪ್ರೀತಿಯಾಗಿಬಿಡು

ಬಿಡಿಸಲಶಕ್ಯ ಬೀಜಗಣಿತವಲ್ಲ
ತೊಳೆದರೆ ತೊಲಗದ ನೋವಿನ ಕಲೆಯಲ್ಲ
ತನ್ನಿಷ್ಟಕ್ಕೆ ಕೈ ಗೀಚಿದ ರೇಖಾಚಿತ್ರವಾಗಿಬಿಡು

ಕಬ್ಬಿಣದ ಕಡಲೆಯಲ್ಲ
ಸುಲಿದಿಟ್ಟ ಬಾಳೆಯ ಹಣ್ಣಲ್ಲ
ಸುಲಭಕ್ಕೆ ಸೋಲದ ಎದೆಚಿಪ್ಪಿನ ಬಡಿತವಾಗಿಬಿಡು

ನೀ ನೀನಾಗಿಬಿಡು
ತಿಳಿನೀಲಿ ಬಾನಾಗಿಬಿಡು
ಅವರಿವರಿಗೆ ತೊಡಕಾಗದೆ ನೀ ಸರಿದಾರಿಯ ತುಣುಕಾಗಿಬಿಡು!

                                                                     --- 17-06-2013