Friday, January 18, 2019

ಆಸೆ

ಕಣ್ಬಿಟ್ಟ ದಿನವೇ ತೊಡಿಸಿದ್ದ
ಜೋಡು ಇನ್ನೂ ಕಾಲಿಗಂಟಿಕೊಂಡೇ ಇದೆ
ಕೊನೆಗದು ಚರುಮಸೀಳಿ ರಕ್ತ ಸೇರಿದ್ದೂ
ತನ್ನಸ್ತಿತ್ವ ನೆನಪಿಸುತ್ತ ಚಿಮ್ಮುವುದು
ಇದೆಲ್ಲ ಹಳೇ ವಿಷಯವೇ ವಿಶೇಷವೇನಿಲ್ಲ

ಹಾಗೇ ರಸ್ತೆಗಿಳಿದು ಹೊರಟರೆ
ಕಣ್ಣ ರಾಚುವ ಬಜಾರಿನ ಸರಕುಗಳು
ಹಾಯಾಗಿ ಮಲಗಿರುವ ನನ್ನ ಕನಸುಗಳಿಗೆ
ಬಣ್ಣಬಣ್ಣದ ಬಟ್ಟೆತೊಡಿಸಿ
ತನ್ನಷ್ಟಕ್ಕೇ ಕೊಂಡಿಕಳಚಿ
ಮಂಗಮಾಯವಾಗುತ್ತವೆ ಎಲ್ಲಿಂದೆಲ್ಲಿಗೋ
ಇವೆಲ್ಲ ಏನೆಂಬ ಪ್ರಶ್ನೆಗೆ
ಉತ್ತರ ಕೊಡದೇ ಬದಲಿಗೆ ನಗುವ
ಇವೆಲ್ಲ ಏನು?

ಈ ಜೋಡು ಅಳತೆಗೆ ತಕ್ಕದ್ದೂ ಅಲ್ಲ
ಸರಿದೂಗಿಸುವ ಪ್ರಯತ್ನಪಟ್ಟಷ್ಟೂ ನನ್ನ-
ನದು ವಿಚಿತ್ರ ಮೌನಕ್ಕೆ ತಳ್ಳಿಬಿಡುತ್ತದೆ
ಓಡಿದರೆ ಮುಗ್ಗರಿಸಿ ಬೀಳುವ ಹಾಗೆ
ನಿಂತರೆ ನಿಂತಲ್ಲೇ ಕುಸಿಯುವ ಹಾಗೆ
ತೆಗೆದು ಬಿಸಾಕಲೂ ಏನೋ ಭಯ
ಕಾಲಡಿಗಿನ ಮಣ್ಣೂ ಚರುಮಸೀಳಿ ರಕ್ತ ಸೇರಿದರೆ?

ನಡೆಯುತ್ತೇನೆ
ಕುಸಿಯತೊಡಗಿದರೋಡುತ್ತೇನೆ
ಮುಗ್ಗರಿಸಿದಂತಾಗಲು ಚಿಮ್ಮಿ
ಬೀಗುತ್ತ ನನ್ನಸ್ತಿತ್ವ ತೋರುತ್ತೇನೆ
ಕಾಲ್ತಳಕ್ಕೆ ಮಣ್ಣ ತಾಗಿಸದಷ್ಟು ನಾಜೂಕು
ನನ್ನ (ನಿಮ್ಮ) ಆಸೆಯೆಂಬ ಈ ಚಪ್ಪಲಿ

                                                  (-- 04-01-2019)