Saturday, August 18, 2012

ಕವನ


ಪಯಣಕ್ಕೆ ಬರಿಯ ಪಯಣಕ್ಕೆ


ತಕ್ಕಡಿ ತಿಮ್ಮಪ್ಪ
ಎಂಟಾಣೆಯಜ್ಜ
ರೂಪಾಯಿಗೆ ಹೆಚ್ಚಿಲ್ಲ
ನಾಲ್ಕಾಣೆಗೆ ಕಮ್ಮಿಲ್ಲ

ಬಡಿಸಿಟ್ಟ ಅನ್ನವನುಂಡು
ಬಿಡಿಸಿಟ್ಟ ಗೋಣಿಯ ಹೊದ್ದು
ಕಂಡಲ್ಲಿ ಮಲಗುವ ತಕ್ಕಡಿ ತಿಮ್ಮಪ್ಪ
ಬೆಳಗಾದರೆ ಎದ್ದು ಹೊರಡುವುದು
ಪಯಣಕ್ಕೆ ಬರಿಯ ಪಯಣಕ್ಕೆ

“ಯಾವನಿವ ಬಡ್ಡೀಮಗ
ದೇವೀ ಪಕ್ಕ ಮಲ್ಕೊಂಡನ”
ಬೊಬ್ಬಿಟ್ಟ ಪೂಜಾರಿಯ ನೋಡಿ
ನಸುನಕ್ಕು ಎದ್ದುಕೊಂಡು
“ಬ್ಯಾಸರಿಸ್ಕೋ ಬ್ಯಾಡ್ರೀ ಸ್ವಾಮ್ಯಾರ,
ತಂಪಿತ್ರೀ, ಎಚ್ಚರಾನೇ ಆಗಿಲ್ರೀ
ದೇವಿಗೊಂದು ನಮಸ್ಕಾರ ಹಾಕಿ
ಜಾಗ ಖಾಲೇ ಮಾಡ್ತೇನ್ರೀ”

ಒಂದಕ್ಷರ ಕಲಿಯದವ
ಕಂಡ ಗಾಡಿಯನೇರುವವ
“ಸಾಹೇಬ್ರ, ಎರಡ್ ರೂಪಾಯಿ ತಗೊಳ್ರೀ
ಟಿಕೇಟು ನೀವೇ ಇಟ್ಕೊಳ್ರಿ”
ಇಳಿಸಿದಲ್ಲಿಳಿದು ಮುಂದಡಿಯನಿಡುವ
ತಕ್ಕಡಿ ತಿಮ್ಮಪ್ಪ ಹೊರಡಲಣಿಯಾಗುವುದು
ಪಯಣಕ್ಕೆ ಬರಿಯ ಪಯಣಕ್ಕೆ

“ಹಳೀ ಕಬ್ಣಾರೀ, ಹಳೀ ಪಾತ್ರಾರಿ”
ನೆನೆದಷ್ಟೂ ಬೇಸರಗೊಂಡು
ತಕ್ಕಡಿ ತೂಗಿದ ಕೈಯೀಗ
ಬುಡಬುಡಕಿ ಹಿಡಿದು
“ಅಣ್ಣಾ,ತಂಗೀ,ತಾಯೀ,ತಂದಿ
ಇಲ್ಲೈತ್ರಿ ನಿಮ್ ಭವಿಷ್ಯಾ
ನಿಮ್ಮಾಣಿಗೂ ನಾನೇಳೋದ್ ಸತ್ಯ
ಎಂಟಾಣಿ ಕೊಟ್ಟು ಬಾಳ್ರಿ ನೂರ್ವರ್ಷ”
ಕೊಟ್ಟಿದ್ದ ಕಟ್ಕೊಂಡು
ಮುಂದಡಿಯಿಟ್ಟ ತಕ್ಕಡಿ ತಿಮ್ಮಪ್ಪ
ಪಯಣಕ್ಕೆ ಬರಿಯ ಪಯಣಕ್ಕೆ.

ಆಗ ತಕ್ಕಡಿ ತಿಮ್ಮಪ್ಪ
ಈಗ ಎಂಟಾಣೆಯಜ್ಜ
ರೂಪಾಯಿಗೆ ಹೆಚ್ಚಿಲ್ಲ
ನಾಲ್ಕಾಣೆಗೆ ಕಮ್ಮಿಲ್ಲ

“ಎಲ್ಲಾವ್ರೀ ನಿಮ್ ಮನೀ ಮಠಾ?”
ಮನಿಯೊಡತಿ ಕೇಳಿದ್ದ ಕೇಳಿ
“ಅವೆಲ್ಲಾ ಕಥೀ ಬಾಳಾನೇ ಅದಾವ್ರೀ,
ಈ ನೆಲಾನೇ ಒಂದ್ ಮಠಾರೀ,
ನಾ ಮಲಗಿದ್ದೇ ನನ್ ಮನೀರಿ "
ಹೊರಟುನಿಂತ ತಕ್ಕಡಿ ತಿಮ್ಮಪ್ಪ
ಊರುವ ಕೋಲನು ಕೈಯಲಿ ಹಿಡಿದು
ವಸಡಿನ ಬಾಯಲಿ ಕವಳವ ಜಗೆದು
ಪಯಣಕ್ಕೆ ಬರಿಗಾಲ ಪಯಣಕ್ಕೆ!
*****
                                          --- 18-08-2012