Monday, October 26, 2015

ಸಿಲುಕು



ನಾನೆಂಬ ಪ್ರಯತ್ನದ ಮುಂದೆ                                                    
ಕಡಲು ನೀನು
ಸುಮ್ಮನೆ ತೆರೆಮರೆಯ ನಾಟಕ
ಹೊರಗಷ್ಟೇ ತೋರಿಕೆಯಾರ್ಭಟ
ಒಳಗೆಲ್ಲ ಭಯಂಕರ ಮೌನ
ಮರೆವೆಂಬ ಹೆಸರಿನ ನೆನಪು ನೀನು
ಹೇಳು
ಕೊನೆಯಬಾರಿ ನಾನೇನಾದರೂ
ಯಾರಿಗಾದರೂ ಕೊಟ್ಟಿರುವುದಿದೆಯೇ?
ಕಣ್ಮುಂದೆ ಜಾರುತಿರುವುದೆಲ್ಲ
ಬರೀ ತೆಗೆದುಕೊಂಡವುಗಳೇ
ಹೇಳಿಬಿಡು ಲೆಕ್ಕಮಾಡಿ
ನೀ ಕೊಟ್ಟ ಘಳಿಗೆಗಳ
ಮರಳಿಸಲು ಏನಿಲ್ಲ
ಹೀಗಿರುವ ನಾನೇ ಎಲ್ಲ

ದೇಹಭಾಷೆ ಮನದ ಆಸೆ
ಭಿನ್ನವಾದ ಮಾತ್ರಕ್ಕೆ
ಕಡಲಸೇರ್ವ ನದಿಯು
ತಾನು ನಿಂತುಹೋದೀತೇ?

ಬರುವುದಿಲ್ಲ ನೋಡು
ಸಮಯಕ್ಕೆ ಹೆಜ್ಜೆ ಹಿಂದಿಡಲು
ನಾನು ನೀನೆಲ್ಲ ಇದರ ಸಿಲುಕುಗಳೇ
ನಿನ್ನೆಯೆಂಬುದು ನಿಜಕ್ಕೂ ನಿರ್ಜೀವ
ಇಂದು ನಾನೇ ಇಲ್ಲ ನಾಳೆ ಹುಟ್ಟಿಲ್ಲ

ನಡೆದೇಹೋಯಿತೆಂಬಬದಿಗೆ
ಸುಮ್ಮನಾಗದೇ
ಬರಿದೆ ಮಾತು ಕಳೆದುಹೋಗಿ
ಹೊರಟೇಹೋದೆ ನೀ
                                                     -- 26-10-2015

Sunday, May 24, 2015

 ಈ ನಾನು ನಾನಲ್ಲ

ನಡೆಯಲು ಬರುವುದೆಂದಾದಮೇಲೆ ನಡೆಯುವುದು ನಿಯಮ
ಓಡುವುದು ನಿಯಮವಲ್ಲ ಖಯಾಲಿ
ಈಗ ತಾನೆ ಕಾಲ್ಕೊಟ್ಟು ನಿಂತ ಮಗುವಿಗೆ ಖಯಾಲಿಯೇ ಖುಷಿ ನಿಯಮವಲ್ಲ
ಓಡುತ್ತದೆ
ಬಿದ್ದರೂ ಸೈ ಓಡುತ್ತದೆ
ಬಿದ್ದು ಅತ್ತು ಎದ್ದು ಮತ್ತೆ ಓಡುತ್ತದೆ
ನಡೆಯುವ ನಿಯಮ ಅದಕ್ಕಿನ್ನೂ ತಿಳಿದೇಯಿಲ್ಲ
ಸಾವಕಾಶವಾಗಿ ತಿಳಿಯುತ್ತದೆ
ಅಲ್ಲಿಂದಲೇ ನಡಿಗೆ ಶುರು
ಅಳುಕುತ್ತ ಅತ್ತಿತ್ತ ನೋಡುತ್ತ ನಡೆಯಲು ಪ್ರಾರಂಭಿಸುವುದು
ಈಗಿನ ನೀವೇ ಆಗಿನ ಆ ಮಗು
ನಡೆಯುತ್ತ ಸಾಗಲು ಮುಂದೊಮ್ಮೆ ನಿಮಗೆ ಏನೇನೋ ಕಾಣಿಸುತ್ತವೆ
ದಾರಿಯಲ್ಲೊಂದು ಕಲ್ಲಿನಂತಹದ್ದೇನೋ ಕಾಣಿಸುತ್ತದೆ
ನೀವು ಕೈಗೆತ್ತಿ ನೋಡಲು ಚಿನ್ನ ನೋಡಿದ ಅನುಭವ
ಹೌದು ಚಿನ್ನವೇ ಇರಬೇಕು
ನಿಮ್ಮ ಕಥೆ ಅಲ್ಲಿಂದಲೇ ಶುರು
ಕುದುರೇಗೇನೋ ಕಟ್ಟುತ್ತಾರಲ್ಲ ಅತ್ತಿತ್ತ ನೋಡದೇ ಮುಂದೆ ಸಾಗಲು
ಅದಕ್ಕೆ ಏನೆನ್ನುತ್ತಾರೋ ತಿಳಿದಿಲ್ಲ
ಗುರಿಯೆಂದು ಕರೆಯುವೆ
ಚಿನ್ನ ಕಂಡ ನಿಮ್ಮ ತಲೆಗೆ ಗುರಿ ಕಟ್ಟಿಕೊಳ್ಳುತ್ತದೆ
ದಾರಿಯಾಕಡೆಯೀಕಡೆ ಕಾಣುವ ನಾಯಿ ಬೆಕ್ಕು ಹಕ್ಕಿ ಮೀನು ಹಾವು ಎತ್ತು ಮಿಂಚುಳು
ನಿಮಗೆ ನಿರ್ಜೀವ ಕಲ್ಲಿನಂತೆ ಕಾಣಿಸುತ್ತವೆ
ಚಿನ್ನದಲ್ಲಿ ಜೀವ
ಏಕೆಂದರೆ ಅವುಗಳಿಗೆ ಕಲ್ಲುಚಿನ್ನವೆಲ್ಲವೊಂದೇ ನಿಮಗಲ್ಲ
ನನಗೂ ಅಲ್ಲ
ಈಗಿನ ನಾನೇ ಆಗಿನ ಆ ಮಗು
ತಡೆಯಿರಿ
ಏನೋ ಕಂಡಂತಿದೆ
ತೆಲೆಮೇಲದೊಂದೇನೋ ಕಟ್ಟಿಕೊಂಡಿರುವುದಿದೆ
ನಿಯಂತ್ರಿಸಲು ನಿಯಮಗಳೂ ಇದೆ
ಈ ನೀವು ನೀವಲ್ಲ
ಈ ನಾನು ನಾನಲ್ಲ



(24-05-2015)

Friday, January 23, 2015

ಮನಸಲ್ಲೇ ಮುಳುಗುವ ಸೂರ್ಯ



ಮನಸಲ್ಲೇ ಮುಳುಗುವ ಸೂರ್ಯ

ಕತ್ತಲಲ್ಲಿ ಕೂರಲು ಜ್ಞಾನವಲ್ಲ ಕಣಾ
ಧೈರ್ಯಬೇಕು
ಹೆಣಸುಡಲು ಮಸಣವೇ ಬೇಕು
ಬೂದಿ ಹಾರಿಹೋಗಲು ಗಾಳಿಬೇಕು

ಬಾವಿಯೊಳಗಣ  ಕುಬ್ಜಕಾಯ
ಹಾವು ಮೊಸಳೆಗಳ ನಡುನಡುವೆ
ಕೂತು ಕತ್ತೆತ್ತಿ ದಿಟ್ಟಿಸುವುದು
ಹತಾಶೆಯಲ್ಲ ಜಾಣಾ ಹಂಬಲ

ಹತ್ತಂತಸ್ತಿನಿಂದ ಕೆಳಗೂ ಮೇಲೂ
ನೋಡೇ ತೀರುವ ನಾನುಗಳು
ನಡುವಲ್ಲೇ ಮರೆಯಾಗುವುದೂ
ದೃಷ್ಟಿತಲುಪುವ ಮೊದಲೇ
ಭವಿಷ್ಯತ್ ಭೂತವಾಗುವುದೂ
ರೆಕ್ಕೆ ಬಿಟ್ಟ ಪುಕ್ಕದಷ್ಟೇ ಸಹಜ
ತೆಪ್ಪಗೆ ಮೈಕಳಚಿ ತಂಪಾಗಿ ತೇಲಲು
ತನುವಲ್ಲ ತಮ್ಮಾ
ಕನಸಿಗೆ ತೆರೆದಿಟ್ಟ ದಿಟ್ಟ ಮನಸು ಬೇಕು

ಗೋಡೆಗಳ ತಂದೊಡ್ಡಿ ಮೈಮರೆತ ನಾವು
ಬಾಗಿಲಿಗೂ ಜಾಗ ಬಿಡಲಿಲ್ಲವೇ?
ಖಾಲಿ ಹಾದಿಗೆ ಹೀಗೆ ಅಣೆಕಟ್ಟು ಕಟ್ಟಿ
ತೆನೆ ಸೊಂಪಾಗಿ ಬರಲು ಕಾಯ್ದಿರುವೆವೇ?

ಮನಸಲ್ಲೇ ಮುಳುಗುವ ಸೂರ್ಯ
ಬಳಲಿ ಬೆಂಡಾಗಲು ಒಂದಿಡೀ ದಿನವಲ್ಲ
ಮನುಜಾ ಅರೆಕ್ಷಣ ಸಾಕು!


--- 23/01/2015

Thursday, January 8, 2015

ಪಂಚಾಂಗ (ಕವನ)



ಪಂಚಾಂಗ

ಹೊಸವರ್ಷಕ್ಕೊಂದು ಪಂಚಾಂಗ ಬಂದಿದೆ
ಕೊಳ್ಳುವವರಿಗೆ ಮಾತ್ರ
ಹೊಸಮಾದರಿಯ ಹೊಸ ಪಂಚಾಂಗ
ಕೊಂಡವರಿಗೆ ಒಂದು ಥರ
ಕೊಳ್ಳದವರಿಗೊಂದು ಥರ
ಕೊಂಡವರಿಗೆ ಹೊಸವರ್ಷ
ಹರ್ಷದೋತ್ಕರ್ಷ*
ಕೊಳ್ಳದವರಿಗೆ…
ನೋಡಿ ಯೋಚಿಸಿ ಇನ್ನೊಮ್ಮೆ
ಕೊಳ್ಳಿ, ಬೆಲೆ ಕಾಸಷ್ಟೇ ಅಲ್ಲ
ನಿಮ್ಮ ಸಮಯ ಕೂಡ!

ಗುಣಿಸಿ ಭಾಗಿಸಿ ಸಾವಿರ ವರುಷ
ಅರಿತಿದೆ ಪಂಚಾಂಗ ನಿಮ್ಮೆಲ್ಲರ ಮನಸ
ಮೂರು ಅಂಶಗಳ ಸೂತ್ರ ಸಿದ್ಧ
ನಿನ್ನೆಯೆಂಬುವ ನನಪು
ಇಂದೆನ್ನುವ ತವಕ
ನಾಳೆಯೆಂಬೋ ಭಯ
ಕೊಳ್ಳಿ, ಕೊನೆಗ್ಯಾಕೆ ಮರುಕ
ಜೀವನಸಾರ ಪುಟಗಳಲೇ ಇರುವಾಗ!
ಇದೇ ಪಂಚಾಂಗ, ಕೂಡಿ ಕಳೆದು ಕಾಸ
ಕೊಟ್ಟಿದೆ ಕೊಂಡವನಿಗೆ ಬದುಕ*

ಹೊಸಮಾದರಿಯ ಪಂಚಾಂಗ
ಕೊಂಡವರಿಗೆ ಒಂದು ಥರ
ಕೊಳ್ಳದವರಿಗೊಂದು ಥರ
ಕೊಳ್ಳಿ, ಬೆಲೆ ಕಾಸಷ್ಟೇ ಅಲ್ಲ
ನಿಮ್ಮ ಸಮಯ ಕೂಡ!

*ನಾ ಮಾರುವವ ಮಾತ್ರ
ಬರೆದವನ ಕುರುಹಿಲ್ಲ!

                                          -- 08-01-2015