Wednesday, October 22, 2014

ಇಂದು ದೀಪಾವಳಿ, ನಾಳೆ?!

ಕೇಳಲು ಸಾಧ್ಯವಾಗದಿದ್ದರೂ
ಅದು ಹಾಡ ಹೊರತು
ಬೇರಲ್ಲವೆಂಬುದು ಅರಿವಾಗುತ್ತಿದೆ
ಅದು ಕಂಗಳ ಹಾಡು
ಕಾಣದ ಸಾಲುಮನಗಳ ಕಾಡು

ಗುಬ್ಬಚ್ಚಿಯಿಲ್ಲದಿರುವಿಕೆಯಲ್ಲೂ
ಅದು ಗೂಡ ಹೊರತು
ಬೇರಲ್ಲವೆಂಬುದು ಅರಿವಾಗುತ್ತಿದೆ
ಅದು ಗಾಳಿಯ ಗೂಡು
ನಿರಾಧಾರ ಕಣಗಳ ಮಾಡು

ನಿಜ, ಇಂದು ದೀಪಾವಳಿ
ಎಲ್ಲೆಲ್ಲೂ ಬೆಳಕಿನದೇ ಹಾವಳಿ
"ಬೆಳಕೇ, ನಿನಗೆ ಆಶ್ರಯದಾತರಾರು?
ನಾನೋ, ಆ ಮಣ್ಣ ಹಣತೆಯೋ?"
ಕತ್ತಲು ಕೇಳಿದ ಪ್ರಶ್ನೆಗೆ
ಬೆಳಕೇ ಮಬ್ಬಾಗಿದೆ!

ಬೆಳಕಿನಂತೆಯೇ ಕವಿತೆ
ಕೆಳಕೆಳಗೆ ಬಂದರಂತೂ ಹಣತೆಯಂತೆ
ಕರಗಿಕರಗಿ ಮನದಮೂಲೆಯ ಸುಡುತಿದೆ
ಅಕ್ಷರಗಳು ಜಾಡುಹಿಡಿದು
ಮತ್ತದೇ ಗೂಡ ಸೇರುತಿವೆ
ಕೇಳಲಾಗದ ಹಾಡ
ಮತ್ತೆ ಮತ್ತೆ ಹಾಡುತಿವೆ
ಶಕ್ತಿಗುಂದಿಯೂ ಬಿಡದೇ ಕೆಣಕುತಿವೆ-
"ಇಂದು ದೀಪಾವಳಿ, ನಾಳೆ?!"


                           --- 28-10-2008