Friday, June 29, 2012

ಚಿಂತನೆ

 " ಮಿಥ್ಯಬಿಂದು ಮತ್ತು ಸತ್ಯಬಿಂದು "

/// ನಾನು ಪಿ.ಯು.ಸಿ. ಎರಡನೇ ವರ್ಷದಲ್ಲಿ ಓದುತ್ತಿದ್ದಾಗ ಭಾಷಾ ವಿಷಯದಲ್ಲಿ ಒಂದು Seminar ಕೊಡುವುದಿತ್ತು. ಅದಕ್ಕಾಗಿ ಮೊದಲು ನಾನು ಯೋಚಿಸಿ ತಯಾರಿಸಿದ್ದ ಲೇಖನವನ್ನು ಈಗ  ಇಲ್ಲಿ ಪ್ರಕಟಿಸುತ್ತಿದ್ದೇನೆ. ಅದೇಕೋ ನಾನು ತಯಾರಿ ಮಾಡಿಕೊಂಡಿದ್ದ  ಈ ವಿಷಯ ತರಗತಿಯಲ್ಲಿ ಹೇಳಲು ಅಸಮಂಜಸ  ಎನಿಸಿ ಆ ದಿನ ಕೊನೆಯ ಕ್ಷಣದಲ್ಲಿ ಬೇರಾವುದೋ ವಿಷಯದ ಮೇಲೆ ಮಾತನಾಡಿಬಿಟ್ಟೆ. ಕಾರಣಾಂತರಗಳಿಂದ ನಾನು ಬರೆದಿಟ್ಟಿದ್ದ ಈ ಲೇಖನವೂ ನಂತರ ನನ್ನ ಕೈಗೆ ಸಿಗಲಿಲ್ಲ. ಆದರೂ ಆಗಾಗ್ಗೆ ಈ ವಿಷಯ ನನ್ನ ತಲೆ ಕೊರೆಯುತ್ತಿತ್ತು. ಒಂದು ಲೇಖನವನ್ನು ಬೇಕೆಂದಾಗಲೆಲ್ಲ ಬರೆಯಲಾಗುವುದಿಲ್ಲ. ಹಾಗಾಗಿ ಕಳೆದುಹೋದ  ಆ ಲೇಖನವನ್ನು ಮತ್ತೆ ಬರೆಯಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಆದರೆ ಆಶ್ಚರ್ಯಕರ ರೀತಿಯಲ್ಲಿ ಎರಡು ದಿನಗಳ ಹಿಂದೆ ಏನನ್ನೋ ಹುಡುಕುವಾಗ, ಅಂದರೆ 5 ವರ್ಷಗಳ ನಂತರ  ಆ ಲೇಖನ ಬರೆದಿಟ್ಟಿದ್ದ ಹಾಳೆ ಪುನಃ ನನ್ನ ಕೈ ಸೇರಿತು. ಕೆಲವು ಕಡೆ ಬದಲಾವಣೆ ಮಾಡಬೇಕೆನಿಸಿತಾದರೂ ಹಾಗೆ ಮಾಡದೇ 5 ವರ್ಷಗಳ ಮೊದಲು ಏನನ್ನು ಚಿಂತಿಸಿ ಹೇಗೆ ಬರೆದಿದ್ದೆನೋ ಹಾಗೆಯೇ ಯಥಾವತ್ ಪ್ರಕಟಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ ///


          ದೇವರು ತಿಳಿದಿರುವವರಿಗೆ ಅವರು ತಿಳಿದುಕೊಳ್ಳಲು ಶ್ರಮವಹಿಸಿರುವವರೆಂದು ಭಾವಿಸಿ ಅನುಗ್ರಹವನ್ನು ನೀಡುತ್ತಾನೆ ಮತ್ತು ತಿಳಿಯದಿರುವವರಿಗೆ ಅವರು ತಿಳಿದುಕೊಳ್ಳಲು ಶ್ರಮವಹಿಸುತ್ತಿರುವರೆಂದೇ ಭಾವಿಸಿ ಅಷ್ಟೇ ಅನುಗ್ರಹವನ್ನು ನೀಡುತ್ತಾನೆ; ಹಾಗಾಗಿ ದೇವರ ಅನುಗ್ರಹದಿಂದ ವಂಚಿತವಾಗುವ ಯಾವ ವಸ್ತುವೂ ಇಲ್ಲ”. ಮಹಾತ್ಮಾ ಗಾಂಧೀಜಿಯವರ ಈ ಹೇಳಿಕೆ ನಾನು ಆಯ್ದುಕೊಂಡಿರುವ ವಿಷಯಕ್ಕೆ ಹತ್ತಿರವಾಗಿರುವುದರಿಂದ ಅದರಿಂದಲೇ ಪ್ರಾರಂಭಿಸಿದ್ದೇನೆ. ಮಾನವರಿಂದ ಹೇಳಿಕೆಯನ್ನು ಪ್ರಾರಂಭಿಸುವ ಅವರು ವಸ್ತುವಿನ ಮೂಲಕ ಕೊನೆಗೊಳಿಸುತ್ತಾರೆ. ಅಚೇತನದಲ್ಲೂ ಚೇತನವನ್ನು ಕಾಣುವ ಅವರ ಹಂಬಲ ವಿಶಿಷ್ಟವಾದುದು.
        ನಾನು ಇಂದು ಮಾತನಾಡುವ ವಿಷಯದ ಶೀರ್ಷಿಕೆಮಿಥ್ಯಬಿಂದು ಮತ್ತು ಸಥ್ಯಬಿಂದು”. ಇನ್ನು ಮುಂದೆ ನಾನಾಡುವ ಮಾತುಗಳೆಲ್ಲವೂ ನನ್ನದು. ಹಾಗಾಗಿ ಅವುಗಳಲ್ಲಿ ಯಾವವೂ ಸರ್ವಾನುಮತದ ಮಾತುಗಳಲ್ಲ, ಸರ್ವಾಭಿಪ್ರಾಯದ ಸಂಗ್ರಹವಲ್ಲ. ಹಾಗಾಗಿ ಯಾರೂ ಅವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಲಿಕ್ಕೆ ಇಚ್ಛಿಸುತ್ತೇನೆ. ಜೊತೆಗೆ ಅದೇ ಕಾರಣಕ್ಕೆ ಈ ಅಭಿಪ್ರಾಯಗಳಿಗೆ ಅವುಗಳದ್ದೇ ಆದ ಸ್ವಂತಿಕೆಯಿದೆ ಎಂದೂ ಅರಿತಿದ್ದೇನೆ.

*****

        ನಾವು ಯೋಚಿಸುವಂತಹ ಪ್ರತಿಯೊಂದು ವಿಷಯವೂ ಸಹ ಅನಂತ ಆಕಾಶವನ್ನು ಹೊಂದಿರಬೇಕೇ ಹೊರತು, ಆ ಬರಿಯ ಸುಂದರ ನಕ್ಷತ್ರವನ್ನಲ್ಲ.
                                        ‘ಅಥವಾ
        ನಾವು ಯೋಚಿಸುವಂತಹ ಪ್ರತಿಯೊಂದು ವಿಷಯವೂ ಸಹ ಯಾವುದೇ ಜಾಗವನ್ನೂ ಆಕ್ರಮಿಸಲು ಅಶಕ್ಯವಾದ ಬಿಂದುವನ್ನು ಕೇಂದ್ರವಾಗಿರಿಸಿಕೊಂಡಿರಬೇಕೇ ಹೊರತು ಆ ಬಿಂದುವಿನ ಪರಿಸರವನ್ನಲ್ಲ ಅಥವಾ ಆ ಬಿಂದುವನ್ನು ಸುತ್ತುವರೆದಿರುವ ಅವಕಾಶವನ್ನಲ್ಲ.
        ಗಮನಿಸಿ, ನಾವು ಸಾಮಾನ್ಯ ಜನರು ವಿಶಾಲತೆಯ ವ್ಯಾಪ್ತಿಗೆ ಬೇಗನೆ ಹೊಂದಿಕೊಂಡುಬಿಡುತ್ತೇವೆ. ನನ್ನ ಪ್ರಕಾರ ಸರ್ವಾಂಗೀಣ ಯೋಚಿಸುವಿಕೆಗೆ ಎರಡು ರೀತಿಯ ವ್ಯಾಖ್ಯೆಗಳನ್ನು ನೀಡಬಹುದು. ಒಂದು ಮತ್ತೊಂದಕ್ಕಿಂತ ಸಂಪೂರ್ಣ ಭಿನ್ನವಾದುದು.
        ಮೊದಲನೆಯ ವ್ಯಾಖ್ಯೆಯ ಪ್ರಕಾರ ನಮ್ಮ ಯೋಚನೆಗಳು ಸುಂದರ ನಕ್ಷತ್ರವನ್ನು ಸುತ್ತುವರೆದಿರುವ ವಿಶಾಲ ಅನಂತ ಆಕಾಶವನ್ನೂ ಒಳಗೊಂಡಿರಬೇಕು. ಇದನ್ನು ನಾವು ಕೊಂಚ ಆಳವಾಗಿ ವಿಚಾರಿಸಿದರೆ ಅರ್ಥೈಸಿಕೊಳ್ಳಬಹುದು. ಎಲ್ಲೆಲ್ಲಿಅತಿದೊಡ್ಡಎಂಬುದು ಇರುವುದೋ ಅಲ್ಲೆಲ್ಲಅತಿಚಿಕ್ಕದುಎಂಬುದೂ ಇರುತ್ತದೆ. ಹಾಗಾಗಿಯೇ ನಾನು ಎರಡನೆಯ ವ್ಯಾಖ್ಯೆಯನ್ನು ನೀಡಲಿಕ್ಕೆ ಮುಂದಾಗಿರುವುದು.
        ಅದರ ಪ್ರಕಾರ ನಮ್ಮ ಮನಸ್ಸಿನ ಯೋಚನೆಗಳು ಕಲ್ಪನಾತೀತ ಅಸ್ತಿತ್ವವನ್ನುಳ್ಳ ಒಂದು dimentionless ಬಿಂದುವನ್ನು ಪ್ರವೇಶಿಸಬೇಕೇ ಹೊರತು ಅದರ ಸುತ್ತಲನ್ನಲ್ಲ. ನಾನೇ ಇದನ್ನು ಹೇಳುತ್ತಿದ್ದರೂ ನನಗೇ ಆಶ್ಚರ್ಯವಾಗುವಂತೆ ಈ ಕುರಿತಾಗಿ ಒಂದು ಸ್ವಲ್ಪವೂ ಮುಂದೆ ವಿಚಾರಿಸಲು ನನ್ನಿಂದಲಂತೂ ಸಾಧ್ಯವಾಗುತ್ತಿಲ್ಲ.ಇಂತಹ dimentionless ಸಂಗತಿಗಳನ್ನು ಕಲ್ಪಿಸಿಕೊಳ್ಳುವುದು ಹೇಗೆಂದು ಸಹ ನನಗೆ ತಿಳಿಯುತ್ತಿಲ್ಲ. ನಾವುಅತ್ಯಂತ ದೊಡ್ಡಕ್ಕಿಂತಲೂ ದೊಡ್ಡದುಎಂದರೂ ಏನನ್ನಾದರೂ ಕಲ್ಪಿಸಿಬಿಡುತ್ತೇವೆ. ಆದರೆಏನೂ ಇಲ್ಲದ ಇರುವಿಕೆಎಂಬುದನ್ನು ಯೋಚಿಸುವ ಪ್ರಯತ್ನವನ್ನು ತಲುಪಲಿಕ್ಕೂ ನಮ್ಮಿಂದ ಸಾಧ್ಯವಿಲ್ಲ. ಆಧ್ಯಾತ್ಮದ ಮೂಲ ಉದ್ದೇಶವೇ ಇಂತಹ ಏನೂ ಇಲ್ಲದಿರುವಿಕೆಯಲ್ಲಿರುವ ಮಹೋನ್ನತ ಶಕ್ತಿಯ ಬಗ್ಗೆ ತಿಳಿದುಕೊಳ್ಳುವುದೇ ಆಗಿದೆ ಎಂದು ನಾನು ಭಾವಿಸಿದರೆ ತಪ್ಪಿಲ್ಲ ಎನಿಸುತ್ತದೆ.
        ನಮ್ಮ ಪೂರ್ವಜರು ಇಂತಹ ಅಸಾಧ್ಯ ಕಲ್ಪನೆಯನ್ನು ಹೊಂದಿದ್ದರಲ್ಲದೇ ಅದರ ಕುರಿತಾಗಿ ಚಿಂತನೆಯನ್ನೂ ನಡೆಸಿದ್ದರೆಂದರೆ ಅವರ ಮನೋಸಾಮರ್ಥ್ಯ ಈಗಿನ ವಿಜ್ಞಾನಿಗಳಿಗಿಂತ ಅದೆಷ್ಟು ಹೆಚ್ಚಾಗಿತ್ತು ಎಂದು ನಾವು ಊಹಿಸಬಹುದು.
        ನನ್ನ ಮಾತಿನ ಶೀರ್ಷಿಕೆಗೂ ನಾನು ಮಂಡಿಸುತ್ತಿರುವ ವಿಷಯಕ್ಕೂ ಏನೂ ಸಂಬಂಧವಿಲ್ಲದಂತೆ ನಿಮಗೆ ತೋರುತ್ತಿದ್ದರೂ ಸಂಬಂಧ ಇದೆ ಎಂದು ಹೇಳಲಿಕ್ಕೆ ಇಚ್ಛಿಸುತ್ತೇನೆ.
        ನಾನು ಏಕೆ ಇಂದು ನನ್ನ ಸೆಮಿನಾರಿನಲ್ಲಿ ಈ ವಿಷಯವನ್ನು ತರಬೇಕಾಯಿತೆಂದರೆ ನಾನು ಮತ್ತು ನನ್ನ ಸ್ನೇಹಿತನಾದ ವಿಕ್ರಮ ಒಮ್ಮೆ ಏನನ್ನೋ ಚರ್ಚಿಸುತ್ತಿರಬೇಕಾದರೆ ವಿಕ್ರಮ ಅತಿ ಸುಂದರವಾದ ಸಂದೇಹವನ್ನೊಂದನ್ನು ವ್ಯಕ್ತಪಡಿಸಿದ. ನಿಮಗೆಲ್ಲರಿಗೂ ತಿಳಿದಂತೆ ವಿಜ್ಞಾನದ ಪ್ರಕಾರ ಎಲ್ಲ ಜೀವಿಗಳ ಸಂಪೂರ್ಣ ದೇಹವೂ ಅದೆಷ್ಟೋ ರಾಸಾಯನಿಕಗಳಿಂದ ಹಾಗೂ ಆ ರಾಸಾಯನಿಕಗಳ ನಡುವೆ ನಡೆವ ಕ್ರಿಯೆಗಳಿಂದ ಮಾಡಲ್ಪಟ್ಟಿದೆ ಎಂಬುದು; ಈ ವಿಷಯದಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೆ ಈ ರಾಸಾಯನಿಕ ಕ್ರಿಯೆಗಳ ಮೂಲಕವೇ ಒಬ್ಬ ವ್ಯಕ್ತಿ ವಿಚಾರ ಮಾಡಲು ಸಾಧ್ಯವೇ? ಅಥವಾ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವೇ? ಹಾಗಾದರೆ ಅದಕ್ಕೆ ಕಾರಣವೇನು? ಎಂಬುದು. ಹೌದು, ಇಂತಹ ಅಗತ್ಯ ಸಂಶಯಗಳು ಮುಂದೆಸಾಗಿ ನಾವು ದಿಗ್ಭ್ರಾಂತರಾಗಿ ವಿಚಾರಿಸಲಿಕ್ಕೆ ಒಂದು ಉತ್ತಮ ಅಡಿಪಾಯವನ್ನು ಹಾಕಿಕೊಡುತ್ತವೆ. ಅಂದರೆ ನಾವು ಅತಿ ಮಹತ್ವವೆಂದು ತಿಳಿದಿರುವ ವಿಜ್ಞಾನಕ್ಕಿಂತಲೂ ಮಹತ್ವದ ಅಥವಾ ಅದನ್ನೂ ಮೀರಿದ ಯಾವುದೋ ಒಂದು ಅಂಶ ಏನೇನನ್ನೋ ನಿಯಂತ್ರಿಸುತ್ತದೆ ಎಂದಾಯಿತಲ್ಲಾ. ಅದು ಆಧ್ಯಾತ್ಮ ಎಂಬ ಸಿದ್ಧಾಂತಕ್ಕೆ ತೀರಾ ಹತ್ತಿರದಲ್ಲಿರುವಂತೆ ನನಗೆ ತೋರುತ್ತದೆ.
        ಹಾಗಾಗಿ ನಾನು ಆಧ್ಯಾತ್ಮವನ್ನುಮಿಥ್ಯಬಿಂದುವೊಳಗಿನ ಸತ್ಯಸಂಗತಿಎಂದು ಪ್ರತಿಪಾದಿಸಲಿಕ್ಕೆ ಬಯಸುತ್ತೇನೆ.

****
        
    ಇನ್ನು ನನ್ನ ಭಾಷಣದ ಎರಡನೇ ಮಹತ್ವದ ಅಂಶವನ್ನು ಪ್ರತಿಪಾದಿಸಲಿಕ್ಕೆನೆರಳು ಮತ್ತು ಪ್ರತಿಬಿಂಬಎಂಬ ಜೋಡಿಯನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತೇನೆ. ಈ ಉದಾಹರಣೆಯೇ ತಪ್ಪಾಗಿರಬಹುದು ಏಕೆಂದರೆ ಇದು ನನ್ನ ಪ್ರತಿಪಾದನೆ.
        ಈ ನೆರಳು ಮತ್ತು ಪ್ರತಿಬಿಂಬ ಎಂಬ ಸಂಗತಿಗಳು ಮೇಲ್ನೋಟಕ್ಕೆ ಸಾಮಾನ್ಯ ಪದಗಳಂತೆ ಕಂಡುಬಂದರೂ ಅವುಗಳ ಬೆನ್ನತ್ತಿ ಸಾಗಿದರೆ ಅವು ನಮ್ಮನ್ನು ಎಲ್ಲೆಲ್ಲೋ ಸಾಗಿಸಿಬಿಡುತ್ತವೆ. ನೆರಳು ಮತ್ತು ಪ್ರತಿಬಿಂಬ ಇವೆರಡರಲ್ಲಿ ಯಾವುದಾದರೊಂದನ್ನು ಆಯ್ದುಕೊಳ್ಳಲು ಹೇಳಿದರೆ ಅದು ಬಹುಶಃ ನಿರ್ಣಯಿಸಲಿಕ್ಕೆ ಸಾಧ್ಯವಾಗದ ವಿಚಾರವಾಗಿ ಪರಿಣಮಿಸಿಬಿಡುತ್ತದೆ. ಯಾಕೆಂದರೆ, ಅದು ಹಾಗೆಯೇ ಯಾಕೆ ಎಂಬುದಕ್ಕೆ ನೇರವಾದ ಕಾರಣ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಯಾವ ವಿಷಯದ ಮೇಲೆ ಮೂಡುವಂತಹ ಸಂಶಯಗಳಿಗೆ ಉತ್ತರಿಸುವುದು ಸರಿಸುಮಾರು ಅಸಾಧ್ಯವೋ ಅಂತಹ ವಿಷಯಗಳನ್ನೇ ನಾನು ಇಂದು ಪ್ರತಿಪಾದಿಸುತ್ತಿರುವುದು ಎಂಬುದನ್ನು ನಾನು ಸದಾ ಮನಸ್ಸಿನಲ್ಲಿ ಇಟ್ಟಿರುತ್ತೇನೆ. ಹಾಗಾಗಿ ಕೆಲವೊಂದು ಪ್ರಶ್ನೆಗಳು ಕೊನೆಯಲ್ಲಿ ಪ್ರಶ್ನೆಗಳಾಗಿಯೇ ಉಳಿಯಬಹುದಾಗಿವೆ. ಏಕೆಂದರೆ ಉತ್ತರಿಸಲು ಸಾಧ್ಯವಾಗುವ ಪ್ರಶ್ನೆಗಳಿಗಿಂತಲೂ ಉತ್ತರಿಸಲು ಸಾಧ್ಯವಾಗದ ಪ್ರಶ್ನೆಗಳೇ ನಮ್ಮನ್ನಾವರಿಸಿವೆ ಎಂದು ಅನಿಸುತ್ತದೆ ನನಗೆ. ನಿಮಗೂ ಹಾಗೆಯೇ ಅನಿಸಬೇಕೆಂದೇನೂ ಇಲ್ಲ. ಇದು ಯಾಕೆ ಎಂಬುದಕ್ಕೂ ನನ್ನ ಬಳಿ ಖಂಡಿತವಾಗಿ ಉತ್ತರವಿಲ್ಲ. ಇದು ಹೀಗೆಯೇ ಪೂರ್ಣವಿರಾಮವಿಲ್ಲದೇ ಮುಂದುವರಿಯುತ್ತದೆ.
        ನಾವು ಚೈತನ್ಯ ಅಥವಾ ಚೇತನ ಎಂಬಂತಹ ವಿಚಾರವನ್ನು ಎದುರಿಗಿರಿಸಿಕೊಂಡು ಮಾತನಾಡಿದರೆ, ಒಬ್ಬ ವ್ಯಕ್ತಿಯ ಆಕಾರವನ್ನು ನಾವು ಅವನ ನೆರಳಿನ ಮೂಲಕ ಅಳೆಯಲಿಕ್ಕೆ ಮುಂದಾದರೆ ನಾವು ದಿನದ ಬೇರೆ ಬೇರೆ ಸಮಯದಲ್ಲಿ ಅದೇ ವ್ಯಕ್ತಿಯ ಬೇರೆ ಬೇರೆ ಆಕಾರವನ್ನು ಪಡೆಯುತ್ತೇವೆ. ಅದು ಆ ವ್ಯಕ್ತಿಯ ಗಮನಕ್ಕೂ ಬರುತ್ತದೆ ಎಂಬುದು ತುಂಬಾ ಗಮನಾರ್ಹವಾದ ವಿಷಯ. ಇದೇ ವಿಷಯವನ್ನು ಮುಂದೆ ಸಾಗಿಸಿ ಸ್ಪಷ್ಟವಾಗಿಸಲು ಒಂದು ಉದಾಹರಣೆಯನ್ನು ಗಮನಿಸೋಣ. ಒಬ್ಬ ವ್ಯಕ್ತಿಯ ಇಡೀ ಜೀವಿತಾವಧಿಯನ್ನು ಒಂದು ದಿನದ ಅವಧಿ ಎಂದು ಪರಿಗಣಿಸೋಣ. ಪೂರ್ವದಿಕ್ಕನ್ನು ಚೈತನ್ಯದ ಆಕರದಿಕ್ಕು ಎಂದು ಪರಿಗಣಿಸೋಣ. ನಾನು ಜೀವಚೇತನವನ್ನು ದಿನದ ಸೂರ್ಯನಿಗೆ ಹೋಲಿಸುತ್ತಿದ್ದೇನೆ ಎಂಬುದು ನಿಮಗೆ ತಿಳಿಯಿತು  ಎಂದು ಭಾವಿಸಿದ್ದೇನೆ.
        ಒಬ್ಬ ವ್ಯಕ್ತಿ ಪೂರ್ವಕ್ಕೆ ಮುಖಮಾಡಿ ನಿಂತಿದ್ದಾನೆ ಎಂದುಕೊಳ್ಳೋಣ. ಸೂರ್ಯೋದಯವಾದ ಸಮಯದಲ್ಲಿ ಆ ವ್ಯಕ್ತಿಯ ಹಿಂದುಗಡೆ ಅತಿ ಉದ್ದವಾದ ನೆರಳೊಂದು ಏರ್ಪಡುತ್ತದೆ. ಆದರೆ ಆ ನೆರಳನ್ನು ಅರಿಯುವ ಸಾಮರ್ಥ್ಯ ಆಗತಾನೆ ಜನಿಸಿದ ಆ ವ್ಯಕ್ತಿಗೆ ರುವುದಿಲ್ಲ. ನಡುನೆತ್ತಿಯ ಮೇಲೆ ಸೂರ್ಯ ಬಂದಾಗ ಅತಿಚಿಕ್ಕ ನೆರಳು ಏರ್ಪಟ್ಟಿದ್ದು ಆತನ ಗಮನಕ್ಕೆ ಬರಬಹುದು, ಬರದೆಯೂ ಇರಬಹುದು. ಈ ನೆರಳಿನಾಟದ ಪ್ರಥಮಾರ್ಧದಲ್ಲಿ ಆ ವ್ಯಕ್ತಿಯು ನೆರಳಿನ ಸ್ವರೂಪವನ್ನೂ ಅದರ ಗುಣಧರ್ಮಗಳನ್ನೂ ಗಮನಿಸಿರುವುದಿಲ್ಲ; ಅದು ಸಹಜ ಸಾಮಾನ್ಯ ಕೂಡಾ. ಇನ್ನು ಅಷ್ಟೇ ಅವಧಿಯ ದ್ವಿತೀಯಾರ್ಧದಲ್ಲಿ ಅವನಿಗೆ ಆ ನೆರಳಿನ ಕುರಿತು ತರ್ಕಿಸುವುದೇ ಕೆಲಸವಾಗಿಬಿಡುತ್ತದೆ. ಸಮಯ ಕಳೆದಂತೆ ಆತ ಇದ್ದಷ್ಟೇ ಇದ್ದರೂ, ಆತನ ಎದುರಿಗೇ ಆತನ ನೆರಳಿನಲ್ಲಿ ಉಂಟಾಗುತ್ತಿರುವ ನಿಯಂತ್ರಣಕ್ಕೆ ಸಿಗದ ಅಸಾಮಾನ್ಯ ಬದಲಾವಣೆಗಳು ಆತನನ್ನು ದಿಗ್ಭ್ರಮೆಗೊಳಿಸುತ್ತವೆ. ಕೊನೆಯಲ್ಲಿ ಸೂರ್ಯಾಸ್ತದ ನಂತರ ಆತ ಅಲ್ಲಿಯೇ ಇದ್ದರೂ ಆತನ ನೆರಳು ಮಾತ್ರ ಮಾಯವಾಗಿ ಹೋಗಿರುತ್ತದೆ. ಇನ್ನೇನಿದ್ದರೂ ಚಂದ್ರ-ನಕ್ಷತ್ರಗಳಿಂದೇರ್ಪಡುವ, ವಿವರಿಸಲಾಗಲೀಯೋಚಿಸಲಾಗಲೀ ನಮ್ಮಿಂದ ಸಾಧ್ಯವಾಗದ ಅಸ್ಪಷ್ಟ ನೆರಳುಗಳು ಮಾತ್ರ ತನ ಸಂಗಾತಿಗಳು. ಕತ್ತಲೆಯೊಳಗಣ ನೆರಳು! ಅದು ಸಹಜ-ಅಸಹಜಗಳ ನಡುವಿನ ಅನಿವಾರ್ಯ!
        ನೆರಳಿನ ಒಂದು ಸುಂದರ ಕಲ್ಪನೆ ನಿಮಗೆಲ್ಲರಿಗೂ ಬಂದಿದೆಯೆಂದು ತಿಳಿದು ಪ್ರತಿಬಿಂಬದೆಡೆಗೆ ಸಾಗುತ್ತೇನೆ. ಪ್ರತಿಬಿಂಬ ಬ ಶಬ್ಧವೇ ಅದನ್ನು  ಚೆನ್ನಾಗಿ ವಿವರಿಸುತ್ತದೆ. ಅಂದರೆ ಬಿಂಬದ ಪ್ರತಿ ಎಂದರ್ಥವೇ?! ಇದೂ ಸಾಮಾನ್ಯವೆಂಬಂತೆ ಕಂಡುಬಂದರೂ, ಸರಿಯಾಗಿ ಒಮ್ಮೆ ಯೋಚಿಸಿನೋಡಿ- ಇದು ಸಾಮಾನ್ಯವೇ?
        ಮತ್ತೊಮ್ಮೆ ಪ್ರತಿಬಿಂಬವನ್ನು ವ್ಯಾಖ್ಯಾನಿಸಿ. ‘ಬಿಂಬದ ಪ್ರತಿ!’ ತುಂಬಾ ಕ್ಲಿಷ್ಟಕರ. ಪ್ರತಿ ಎಂಬುದರ ಅರ್ಥ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಒಂದು ವಸ್ತುವಿನ ಯಥಾವಥ್ ಗೆಪ್ರತಿಎನ್ನುತ್ತೇವೆ ಅಲ್ಲವೇ? ಆದರೆ ಇಲ್ಲಿನೋಡಿ. ಇದು ನೈಜತೆಯ ಪ್ರತಿಯಲ್ಲ; ಬಿಂಬದ ಪ್ರತಿ! ಸರಿಯಾಗಿ ವಿಷಯದ ಒಳ ಹೊಕ್ಕವನಿಗೆ ಮೈ ಜುಂ ಎನ್ನುತ್ತದೆ. ನಾವು ಸಹಜವಾಗಿ ಬಳಸುವ ಕೆಲವೊಂದು ಶಬ್ಧಗಳ ಗೂಢಾರ್ಥ ಒಮ್ಮೊಮ್ಮೆ ಊಹೆಗೂ ನಿಲುಕದಂತಿರುವ ಹಾಗೆ ನಾವು ಅವನ್ನು ಕಲ್ಪಿಸಿಬಿಡಬಹುದು!
        ಉದಾಹರಣೆಯೊಂದಿಗೆ ವಿವರಿಸಿದರೆ ಉತ್ತಮವಾಗಿ ತಿಳಿಯುತ್ತದೆ. ಒಬ್ಬ ವ್ಯಕ್ತಿ (ಸೂರ್ಯಾಸ್ತದೊಂದಿಗೆ ವಿವರಣೆಯನ್ನು ಮೀರಿಹೋದ  ಮೊದಲ ವ್ಯಕ್ತಿಯಲ್ಲ, ನೆನಪಿರಲಿ!) ಒಂದು ಶುಭ್ರವಾದ ಕೊಳದ ಮುಂದೆ ಬಂದು ನಿಂತ ಎಂದು ಭಾವಿಸೋಣ. ಆತನಿಗೆ ಪ್ರತಿಬಿಂಬ ಗೋಚರವಾಗುತ್ತದೆ. ನಾವು ಮೇಲ್ನೋಟಕ್ಕೆ ಆ ಕೊಳದ ನೀರಿನಲ್ಲಿ ಏರ್ಪಡುವ ಚಿತ್ರಣವನ್ನೇ ಬಿಂಬ ಎಂದು ಪರಿಗಣಿಸುತ್ತೇವೆ. ಅಂದರೆ ಆತನಿಗೆ ಪ್ರತಿಯಾದ ಬಿಂಬ ಎಂದು ಅರ್ಥೈಸಿಬಿಡುತ್ತೇವೆ. ಆದರೆ ಇದೇ ಅದರ ನಿಜವಾದ ಅರ್ಥವೇ? ನೀರಿನಲ್ಲಿ ಏರ್ಪಡುವ ಚಿತ್ರಣ ದುಪ್ರತಿ’. ಆಗ  ಪ್ರತಿಚಿತ್ರಣಕ್ಕೆ ಕಾರಣವಾದ ವಸ್ತು ಕೇವಲ ಒಂದು ಬಿಂಬ ಎಂಬ ಮಾರ್ಮಿಕ ಅಂಶ ನಮ್ಮ ಗಮನಕ್ಕೆ ಬರುತ್ತದೆ. ಬಿಂಬ ಒಂದೇ ಆಗಿದ್ದರೂ ಅದರ ಪ್ರತಿ ಬೇರೆ ಬೇರೆ ಆಕರಗಳಲ್ಲಿ ಬೇರೆ ಬೇರೆ ಚಿತ್ರಣವನ್ನು ನೀಡುತ್ತದೆ. ನಿಂತ ನೀರಿನಲ್ಲಿ ಒಂದು ರೀತಿ, ಹರಿವ ನೀರಿನಲ್ಲಿ ಒಂದು ರೀತಿ, ಕೆಸರಿನಲ್ಲಿ ಒಂದು ರೀತಿ, ಕನ್ನಡಿಯಲ್ಲಿ ಒಂದು ರೀತಿ, ಎದುರಿನವನ ಕಣ್ಣಗುಡ್ಡೆಯಲ್ಲಿ ಒಂದು ರೀತಿಹೀಗೇ. ಅಂದರೆ ಈ ಬಿಂಬ ನಮ್ಮ ಉದಾಹರಣೆಯಲ್ಲಿರುವ ವ್ಯಕ್ತಿ. ಹಾಗೂ ಬಿಂಬಕ್ಕೆ ಕಾರಣವಾದ ನೈಜವಸ್ತು ಎಂಬುದು ಮಾತ್ರ ನಮ್ಮ ತರ್ಕಕ್ಕೆ ನಿಲುಕದ ಅದರಾಚೆಯ ಯಾವುದೋ ಒಂದು ಸಂಗತಿ!
        ಅಂದರೆ ನೆರಳು ಕಾಲಕ್ಕೆ ತಕ್ಕಂತೆಯೂ, ಪ್ರತಿಬಿಂಬವು ಆಕರಕ್ಕೆ ತಕ್ಕಂತೆಯೂ ಬದಲಾಗುತ್ತದೆ ಎಂದು ಹೇಳಬಹುದು. ಆದರೆ ಇವೆರಡಕ್ಕೂ ಕಾರಣವಾದ ಸಂಗತಿ ಮಾತ್ರ ಯಾವಾಗಲೂ ಬದಲಾಗದೇ ಒಂದೇ ರೀತಿ ಇರುತ್ತದೆ. ಅದನ್ನೇ ಇರಬಹುದು ನಮ್ಮ ಪೂರ್ವಜರುಆತ್ಮಅಥವಾಚೈತನ್ಯಎಂದು ಹೆಸರಿಸಿದ್ದು.
        ಈ ರೀತಿಯಾಗಿನೆರಳು-ಪ್ರತಿಬಿಂಬಎಂಬವುಗಳು ನನ್ನ ಎರಡನೇ ಅಂಶವಾದಸಥ್ಯಬಿಂದುವೊಳಗಿನ ಮಿಥ್ಯಸಂಗತಿಎಂಬುದರ ಪ್ರತಿಪಾದನೆಗೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತವೆ.

****
        
            ಇನ್ನು ಮೂರನೆಯ ಅಂಶದತ್ತ ವಾಲಲಿಕ್ಕೆ ಬಯಸುತ್ತೇನೆ. ನೀವೆಲ್ಲರೂ ಎರಡು ಮಂಗಗಳು ಹಾಗೂ ಒಂದು ಬೆಕ್ಕಿನ ಕಥೆಯನ್ನು ಕೇಳಿರುತ್ತೀರಿ ಅಲ್ಲವೇ? ಎರಡು ಮಂಗಗಳು ಸೇರಿ ಹೇಗೋ ಒಂದು ದೊಡ್ಡ ಬೆಣ್ಣೆ ಮುದ್ದೆಯನ್ನು ಸಂಪಾದಿಸಿಕೊಂಡು ಬಂದವಂತೆ. ನಂತರ ದಾರಿಯಲ್ಲಿ ಎದುರಾದ ಬೆಕ್ಕೊಂದು ಆ ಬೆಣ್ಣೆಮುದ್ದೆಯನ್ನು ಅವುಗಳಿಗೆ ಸರಿಯಾಗಿ ಪಾಲು ಮಾಡಿ ಹಂಚಿಕೊಡುತ್ತೇನೆ ಎಂದು ನಂಬಿಸಿ ನಂತರ ಸಂಪೂರ್ಣ ಬೆಣ್ಣೆಯನ್ನೂ ತಾನೊಬ್ಬನೇ ತಿಂದು ಹೋದ ಆ ಕಥೆ ನಿಮಗೆಲ್ಲರಿಗೂ ನೆನಪಿರಬಹುದು. ಮುಂದೆ ಬೆಳಸಬಹುದಾಗಿದ್ದ  ಕಥೆಯನ್ನು ಅಷ್ಟಕ್ಕೇ ಬಿಟ್ಟಿರುತ್ತೇವೆ. ಕಥೆಯ ಮುಂದಿನ ಭಾಗವನ್ನು ನಾವು ಹಲವು ರೀತಿಯಲ್ಲಿ ನಾವು ಬೆಳೆಸಬಹುದಾಗಿದೆ. ಮಂಗಗಳಿಗೆ ಏನಾಗಿರಬಹುದು? ಬೆಕ್ಕಿಗೆ ಏನಾಗಿರಬಹುದು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ ಮುಂದುವರೆಯುವುದು ಕೂಡ ಸಮಂಜಸವೇ ಆಗಿದೆ. ನೇರವಾದ ಯೋಚನೆ ನಮ್ಮನ್ನು ಆ ಮಂಗಗಳಿಗೆ ನಷ್ಟವಾಗಿದೆ ಎಂಬತ್ತ ಕೊಂಡೊಯ್ಯುತ್ತದೆ. ಅದು ಒಂದು ರೀತಿಯಲ್ಲಿ ನಿಜ ಕೂಡ. ಒಂದು ರೀತಿ ಎಂಬ ಶಬ್ಧದ ಜೊತೆಗೇ ಹಾಗಾದರೆ ಇನ್ನೊಂದು ರೀತಿ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾಗಿ ಈಗ ಇನ್ನೊಂದು ರೀತಿಯನ್ನು ಪರಿಗಣಿಸುತ್ತೇನೆ. ಆ ಇನ್ನೊಂದು ರೀತಿ, ನಡೆದ ಘಟನೆಯಿಂದ ಮಂಗಗಳಿಗೆ ಆಗಬಹುದಾಗಿದ್ದ ಅಚಾತುರ್ಯವೊಂದು ತಪ್ಪಿತು ಎಂದು ತಿಳಿಸುತ್ತದೆ. ಆ ಎರಡೂ ಮಂಗಗಳೂ ಆ ಬೆಣ್ಣೆಮುದ್ದೆಗಾಗಿ ಜಗಳವಾಡುವ ಸಂದರ್ಭ ಏರ್ಪಟ್ಟಿದ್ದರೆ ಅನಾಹುತ ನಿಶ್ಚಿತವಾಗಿತ್ತು. ಹಾಗೊಂದು ವೇಳೆ ಬೆಕ್ಕು ಎದುರಾಗದೇ ಆ ಮಂಗಗಳೇ ಸೌಹಾರ್ದಯುತವಾಗಿ ಆ ಬೆಣ್ಣೆಮುದ್ದೆಯನ್ನು ಪಾಲುಮಾಡಿಕೊಂಡು ತಿಂದವೆಂದೇ ಇಟ್ಟುಕೊಂಡರೂ ಸಾಧ್ಯತೆಗಳು ಅಲ್ಲಿಗೇ ಮುಗಿಯುವುದಿಲ್ಲ. ಅಷ್ಟೊಂದು ಬೆಣ್ಣೆಯನ್ನು ತಿಂದಿದ್ದೇ ಆದರೆ ಅವುಗಳಿಂದ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿಯಿತ್ತೇ ಎಂಬ ಸಂಶಯವೂ ಮಾನ್ಯವಾದುದೇ ಆಗಿದೆ. ಪೂರ್ಣ ಬೆಣ್ಣೆಯನ್ನೂ ತಾನೊಬ್ಬನೇ ತಿಂದ ಆ ಬೆಕ್ಕು ಅದನ್ನು ಜೀರ್ಣಿಸಿಕೊಳ್ಳಲು ಅದೆಷ್ಟು ಕಷ್ಟಪಟ್ಟಿರಬೇಕು ಎಂದೂ ನಾವೂ ಆ ಕಥೆಯನ್ನು ಬೆಳೆಸಬಹುದಾಗಿದೆ.
        ಹಾಗಾಗಿಸೋಲು-ಗೆಲುವುಗಳನ್ನು ನಿರ್ಧರಿಸುವುದು ಅಷ್ಟು ಸುಲಭವಲ್ಲ. ನಮಗೆ ದೊರಕಿದ ಗೆಲುವುಗಳೆಲ್ಲವೂ ನಿಜವಾಗಿಯೂ ಗೆಲುವುಗಳೆಂದೇ ಹೇಳಲು ಸಾಧ್ಯವೇ ಇಲ್ಲ, ಏಕೆಂದರೆಇನ್ನೊಂದು ರೀತಿಎಂಬುದು ಆಮೊದಲ ರೀತಿಎಂಬುದರ ಮೇಲೆ dominant ಆಗಿರಬಹುದು. ಅಷ್ಟೇ ಅಲ್ಲದೇ ನಾವು ಏನನ್ನೆಲ್ಲಾ ಸೋಲು ಎಂದು ಪರಿಗಣಿಸಿರುತ್ತೇವೆಯೋ ಅವುಗಳೆಲ್ಲಾ ನಿಜವಾಗಿ ಸೋಲುಗಳಾಗಿರದೇ ಮುಂದೆ ಕಾದಿರುವ ಅದಾವುದೋ ಗೆಲುವಿನ ಪೀಠಿಕೆಯೂ ಆಗಿರಬಹುದು.
        ಹಾಗಾಗಿಸೋಲು-ಗೆಲುವುಗಳೆಂಬವು ನನ್ನ ಕೊನೆಯ ಅಂಶವಾದಮಿಥ್ಯಬಿಂದುವಿನಲ್ಲಿಯ ಮಿಥ್ಯಸಂಗತಿಎಂಬುದನ್ನು ಪ್ರತಿಪಾದಿಸಲಿಕ್ಕೆ ಯೋಗ್ಯವಾಗಿ ನಿಲ್ಲುತ್ತವೆ.
****
ನಾನು ಇಲ್ಲಿಯವರೆಗೆ ಹೇಳಿದ್ದು ಕೇವಲ ಮೂರೇ ಮೂರು ಸಂಗತಿಗಳನ್ನು-
1)     *ಮಿಥ್ಯಬಿಂದುವಿನಲ್ಲಿಯ ಸತ್ಯಸಂಗತಿ
       *ಸತ್ಯಬಿಂದುವಿನಲ್ಲಿಯ ಮಿಥ್ಯಸಂಗತಿ
      *ಮಿಥ್ಯಬಿಂದುವಿನಲ್ಲಿಯ ಮಿಥ್ಯಸಂಗತಿ
ಹಾಗಾಗಿ ಒಂದು ಅಂಶ ಬಿಟ್ಟುಹೋದಂತೆ ಕಂಡುಬರುತ್ತದೆ. ಅದೆಂದರೆ ಸತ್ಯಬಿಂದುವಿನಲ್ಲಿಯ ಸತ್ಯಸಂಗತಿ ಎಂಬುದು. ಅದು ನಮಗಾರಿಗೂ ಇನ್ನೂ ಅರಿವಿಗೆ ಬಾರದ ಆ ದೇವರೇ ಇರಬಹುದುವಿಜ್ಞಾನದ ರಹಸ್ಯವೇನೋ ಇರಬಹುದು; ಅಥವಾ ಇನ್ನೇನೋ. ಆ ಕಲ್ಪನೆ ನನಗೆ ನಿಲುಕಿಲ್ಲ. ಹಾಗಾಗಿ ನಾನು ಆ ಕುರಿತು ಎದುರಾಗುವ ಸಂಶಯಗಳನ್ನು ಪ್ರಶ್ನೆಯಾಗಿಯೇ ಉಳಿಸುತ್ತಿದ್ದೇನೆ. ಅದಕ್ಕೆ ಉತ್ತರ ಕಂಡುಹಿಡಿಯುವುದು ಅಂತಂತವರಿಂದಲೇ ಸಾಧ್ಯ ಅಥವಾ ಅವರಿಂದಲೂ ಕಷ್ಟಸಾಧ್ಯ!
                                     ******************

                                                            --- ನರೇಶಕುಮಾರ ಹೆಗಡೆ ದೊಡ್ಮರಿ
                                                                 ಸಪ್ಟೆಂಬರ್ , 2007

Saturday, June 2, 2012

ನಾಳೆಗೆ ತೆರೆಯುತ್ತ

ನಾಳೆಗೆ ತೆರೆಯುತ್ತ....

ಮರಿಗುಬ್ಬಚ್ಚಿ ಸತ್ತ ಮರದ ಕೆಳಗೀಗ
ಮರಣ ರೋದನ
ಬಚ್ಚಿಟ್ಟ ಮರಿಯಿಂದು ಗೂಡೊಳಗಿಲ್ಲ
ಕಾಣದ ತನ್ನ ಮರಿಗಾಗಿ
ಗುಬ್ಬಚ್ಚಿ ಬಾನೆಲ್ಲ ಹುಡುಕುತ್ತ
ತನ್ನನ್ನೆ ಮರೆಯುತ್ತ
ಎದೆಯೆಂಬುದಿದೆ ಅದಕ್ಕೂ
ಗುಬ್ಬಚ್ಚಿಗೂ ಮನವಿದೆ

ಆಕ್ರೋಶ-ಉದ್ವೇಗಗಳ ಪರಿ
ಅದರ ಹಿಂಡಿ ಹಿಸುಕುತ್ತ
ತನ್ನದೆಂಬುದಿದ್ದರೆ ತನ್ನ ಮರಿಯಷ್ಟೇ
ಚೀರಾಡಿದೆ
"ಚಿಂವ್ ಚಿಂವ್" ಕೂಗಾಡಿದೆ
ಅದಕ್ಕೂ ನೆನಪಿದೆ
ಮೊಟ್ಟೆಯೊಡೆದು ಮರಿ ಹೊರಬಂದ ಕ್ಷಣ
ಮರೆತಿಲ್ಲವದು
ಮರಿಗೆ ತಾನ್ ನಿನ್ನೆ ನೀಡಿದ್ದ ಗುಟುಕ


ಆ ದೂರದಲ್ಲಿ
ತಾ ಕಟ್ಟಿದ ಗೂಡು
ನಾಳೆಯ ಪ್ರತಿರೂಪದಂತಿದೆ
"ಬಾ ಉಳಿದೆರಡು ಮೊಟ್ಟೆಗೆ ಕಾವು ಕೊಡು"
ಕೈ ಬೀಸಿ ಕರೆದಂತಿದೆ


ಸಂಜೆ ಮಸುಕಿನ ಚಳಿಗಾಳಿ
ನೂಕಲು ಗುಬ್ಬಿಯ ಮತ್ತೆ ಗೂಡೊಳಗೆ
ಮೊಟ್ಟೆಗಿಟ್ಟ ಕಾವು ಫಲಿಸಿ
ಮರಿ ಮತ್ತೆ ಜನಿಸಿದೆ


ಬಿಸಿಲ ಕಂಡ ಗೂಡ ತೊರೆದು
ಗುಬ್ಬಿ ರೆಕ್ಕೆ ಬಿಚ್ಚಿ
ಮರಿಗೆ ಕೊಡುವ ಕೂಳ ನೆನೆದು
ಬಾನೆತ್ತರಕ್ಕೆ ಚಿಮ್ಮಿ
"ಚಿಂವ್ ಚಿಂವ್"
ಮರಿಯ ಕೂಗು
ಮುಂಜಾನೆ ಮಂಜಿಗೆ ಮೆರುಗು


ನಿನ್ನೆ ನಾಳೆಗಳ ಬಾಳೆ ಹಾಗೇ
ನಿನ್ನೆಯ ಮರೆಯುತ್ತ
ನಾಳೆಗೆ ತೆರೆಯುತ್ತ


********


[19-05-2012]