Wednesday, March 19, 2014

ಸ್ಥಾನಪಲ್ಲಟ




ಸ್ಥಾನಪಲ್ಲಟ


ಕಾಲಿಗೆ ಕಟ್ಟಿದ್ದ ಪಟ್ಟಿ ತೆಗೆದು
ಕಣ್ಣಿಗೆ ಕಟ್ಟಿ ಬಿಟ್ಟಿದ್ದಾರೆ
ಇಗೋ ನಿನ್ನ ಸ್ವಾತಂತ್ರ್ಯ, ನಿನ್ನಿಚ್ಛೆ
ನಿನ್ನೆ ತನಕ ನೆಲಕಚ್ಚಿ ನಿಂತಿದ್ದ ಕಾಲು
ತಳಬಿಟ್ಟು ಹಾರಿದೆ ಹೌಹಾರಿದೆ
ಕಟ್ಟಿಟ್ಟ ಕಣ್ಣಪಟ್ಟಿಗೂ
ನೆಗೆದಿಟ್ಟಿರುವ ಕಾಲ ಹೆಜ್ಜೆಗೂ
ನನ್ನೀ ಇರುವಿಕೆಯೆಂಬುದಿದೆಯಲ್ಲಅಷ್ಟೇ ಅಂತರ!

ಓಟ ಪ್ರಾರಂಭ  
ಎಲ್ಲಿಗೆ? ಎಲ್ಲೆಲ್ಲಿಗೋ
ಸ್ವಾತಂತ್ರ್ಯಕ್ಕೆ ಸತ್ಯವೊಂದೇ  ಸರಹದ್ದು
ಬಿಟ್ಟಾಗ  ಓಡಿಬಿಡಬೇಕು
ಕಾಲೆಂದಿದೆ  ನೀನೆಂದರೆ ನಾನೇ, ನಡೆ ಮುಂದೆ
ತನಗೇನೂ ಕಾಣದ ಕಣ್ಣು  ಕೇಳಿದೆ
ನೀ ಯಾರು? ನೀ ಯಾರು?”
ನಾನೆಂಬುದು ಯಾವುದೀಗ?
ಬಿಟ್ಟಿರುವ ಕಾಲೋ? ಕಟ್ಟಿರುವ ಕಣ್ಣೋ?

ಸ್ವಾತಂತ್ರ್ಯಪಟ್ಟಿ ತೆಗೆದೊಡನೆ
ಸುಟ್ಟು ಬೂದಿಯಾಗುವುದಿಲ್ಲ
ಸ್ಥಾನಪಲ್ಲಟವಾಗುತ್ತದಷ್ಟೇ
ನನ್ನದೇ ಇರಬಹುದು ಕಾಲು-ಕಣ್ಣೆರಡೂ
ಬೆಸೆಯಲಿ ಹೇಗೆ ಈಗೆಲ್ಲ
ನಾನೆಂದರೇನೆಂಬುದೇ ಪ್ರಶ್ನೆಯಾಗುಳಿದಿರುವಾಗ

ಕಳೆದ ಸ್ವಾತಂತ್ರ್ಯದ ಕಣ್ಣಹನಿ
ಕಾಲ ಸವೆದ ವೇಗದೋಟ
ನಡುವೆ ನಿಂತ ನನ್ನತನ

ಅಹೋ! ಅಹೋ!
ಕಣ್ಣಿದ್ದೂ ಕುರುಡಾದವರು ಓಟಕ್ಕಿಳಿದಿದ್ದಾರೆ
ನೆಲಕಚ್ಚಿ ನಿಂತವರೆಲ್ಲ ಸರಿದು ನಿಲ್ಲಿ!
ನಾಳೆ ನಿಮ್ಮ ಸರದಿ
ಕೊಟ್ಟಿರುವ ಪಟ್ಟಿ ಕೈಲಿ ಹಿಡಿದು ತನ್ನಿ!

                                               -- 19 -03 -2014