Saturday, July 16, 2022

 ಈ ಕೆಳಗಿನ ತಿನಿಸು ಎಲ್ಲರಿಗೂ ತುಂಬಾ ಪ್ರೀತಿ.

ಆದರೆ ಮಾಡುವುದು ಕಷ್ಟ ಎಂದು ಬಹುತೇಕ ಜನ ಅಪರೂಪಕ್ಕಷ್ಟೇ ಪ್ರಯತ್ನಿಸುತ್ತಾರೆ.
--------------
ತಿನಿಸು: ಸಂತೋಷ
--
ಬೇಕಾಗುವ ಕನಿಷ್ಟ ಸಾಮಗ್ರಿಗಳು:
ಚೆನ್ನಾಗಿ ನೆನೆದಿರುವ ವಿಚಾರ
ನುಣ್ಣಗೆ ರುಬ್ಬಿಕೊಂಡ ತಾಳ್ಮೆ
ಹಾಗೂ
ರುಚಿಗೆ ತಕ್ಕಷ್ಟು ಮರೆವು.

(ಆಗಸ್ಟ್‌ 8, 2020)

Saturday, May 30, 2020

ಆಳಕ್ಕಿಳಿಯದ ಕೆಲ ನೋವುಗಳು

"ನಾವಲ್ಲ ಬರೀ ನಮ್ಮಂತವರೊಂದಿಗೇ"
ಅಥವಾ-
"ಆಳಕ್ಕಿಳಿಯದ ಕೆಲ ನೋವುಗಳು"
--------------------------
ಆಳಕ್ಕಿಳಿಯದ ಎರಡನೇ ನೋವು:
ತೀರಾ ಸಿನಿಕರಾದ ನಾವೆಲ್ಲ
ಚಪ್ಪಾಳೆಗೆ ಹಾತೊರೆದು
ನಮ್ಮತನ ಮಾರುವವರು
ನಾಳೆ ಅ ಹೋಗಿ ಬ
ಬರಲದರ ಬಾಲ ಹಿಡಿದು
ಜೋತುಬಿದ್ದಾದರೂ
ಹಿಂದ್ಹಿಂದೆ ಓಡುವವರು
ನಾಳೆಯ ಮರುಕದ ಹುಟ್ಟು
ನಿನ್ನೆಯ ಕನಸಿನ ಗುಟ್ಟು-
ಎಂಬುದನ್ನ ತಿಳಿದೂ ತಿಳಿದೂ
ಗೆಲುವಿನ ಜಿಂಕೆಯ ಬೆನ್ನತ್ತಿ
ಇಂತಿಪ್ಪ ಚೆಂದದ ಇಂದನೆಲ್ಲ
ತಿವಿದು ಚೆಂಡಾಡಿ ಕೊನೆಗೆ
ಸೋತು ಸುಣ್ಣವಾಗುವವರು
ನಮ್ಮ ನೋವುಗಳನ್ನು ನಾವು
ದ್ವೇಷಿಸಿತ್ತ ಕೂತು
ಆಳಕ್ಕಿಳಿಯಲು ಬಿಡದೆ
ತಡೆಗೋಡೆ ಹಾಕುತ್ತೇವೆ
ಏಕೆಂದರೆ ನಾವೆಲ್ಲ
ಚಪ್ಪಾಳೆಗೆ ಹಾತೊರೆದು
ನಮ್ಮತನ ಮಾರುವವರು
ನಾಳೆ ಅ ಹೋಗಿ ಬ
ಬರಲದರ ಬಾಲ ಹಿಡಿಯುವವರು
ಮಾತಿನ ಮಲ್ಲರು ನಾವೆಲ್ಲ
ಭಾಷಣದಲ್ಲೋ ವಿವೇಕಾನಂದರು
ಯಾರಿಲ್ಲದಿರುವಾಗ ಕೈಲಿರುವ ಕಸವ
ರಸ್ತೆಗೆಸೆದು ನುಣುಚಿಕೊಳ್ಳುವ
ನಾವುಗಳು ದೊಡ್ಡಸ್ತಿಕೆಗೆ
ಕಾದು ಕೂತಿರುವ
ಹಿಸುಕಿದಷ್ಟೂ ಕುಗ್ಗುವ
ತೀರಾ ಸಣ್ಣ ಮನಸ್ಸಿನವರು
(ಒಂದು ಹಂತ ಮುಗಿದಿದೆ.
ಇಲ್ಲಿಗೇ ಓದುವುದನ್ನ ನಿಲ್ಲಿಸಬಹುದು)
ಆಳಕ್ಕಿಳಿಯದ ಮೊದಲ ನೋವು:
ಇಷ್ಟೆಲ್ಲ ಮಾಡುವ ನಾವುಗಳು
ದೂರದೂರವೇ ಕುಳಿತಿರುತ್ತೇವಲ್ಲ
ಹತ್ತಿರ ಸುಳಿಯುವ ಯಾವ ಸುಳಿವೂ
ನಮ್ಮ ಕಣ್ಗಳಲ್ಲಿ ಕಾಣುವುದಿಲ್ಲ
ಅಥವಾ ಆ ಬಗೆಗಿನ
ಧೈರ್ಯ ಸಾಲುವುದಿಲ್ಲ?
ಜನ ತುಂಬಿರುವ ಬಸ್ಸ ಹತ್ತಿ
ಬೆವರು ಹೆಗಲಿಗೆ ಹೆಗಲ ತಾಗಿಸಿ
ನಿಂತಲ್ಲೇ ಹಾಗೇ ನಿಂತು ಯೋಚಿಸಿ
ಕೊನೆಯ ಸ್ಟಾಪು ಮೆಜೆಸ್ಟಿಕ್ಕಲ್ಲಿ
ಇಳಿಯುವ ಜರೂರತ್ತಿದೆ
ಎಂಬ ಅರಿವಿದೆಯೇ?
(ಈ ಜರೂರತ್ತಿನ ಬಗ್ಗೆ ಕುಹಕ
ನಗೆಯಾಡುವವರು,
ಇಲ್ಲಿಗೇ ಓದು ನಿಲ್ಲಿಸುವುದೊಳಿತು)
ಅಲ್ಲೆಲ್ಲ ಎಲ್ಲೆಲ್ಲಿಂದಲೋ ಬರುವ ಜನ
ಪೇಟೆಯೆಂಬ ವಿಶ್ವಾಸ ಹಾಗೂ
ಭಾರತದ ಹಳ್ಳ ಹಿಡಿಯುತ್ತಿರುವ
ಹಳ್ಳಿಗಳ ಮರುಕ ರಾಚುತ್ತದೆ
ಹಾಗೇ ರಸ್ತೆ ದಾಟಿ ರೈಲ್ವೆ ತಲುಪಿ
ನಮಗೆಲ್ಲ ನೋಡಲಿಷ್ಟವಿಲ್ಲದ
ದೋಚಿದ ಕನಸುಗಳ ಭಾರ
ಕಾಣಸಿಗುತ್ತವೆ ಆದರೆ ಕೈಹಾಕಿ
ಭಾರ ಅಳೆಯಲೆತ್ನಿಸಿ
ಊಹುಂ ಆಗದು ನಮ್ಮಿಂದ
ಬಿಟ್ಟು ಸುಮ್ಮನಾಗಿಬಿಡಿ
ಯಾಕೆ ಹೇಳಿ?
ನಾವಲ್ಲ ಬರೀ
ನಮ್ಮಂತವರೊಂದಿಗೇ
ವಾದ ಮಾಡುವುದು
ಹರಟೆ ಕೊಚ್ಚುವುದು
ಚರ್ಚೆ ಮಾಡುವುದು
ಒಮ್ಮೊಮ್ಮೆ ಗಂಭೀರ ವಿಷಯಕ್ಕೆಲ್ಲ
ನಕ್ಕು ನಾಚಿಕೆ ಹುಟ್ಟಿಸುವುದು
ಕೆಲವೊಮ್ಮೆ ಬೇಡದ್ದಕ್ಕೂ
ಹೌಹಾರಿ ತಿಪ್ಪೆಯಲ್ಲಿ
ತಂದೂರಿ ಹುಡುಕುವುದು
ನಾವೆಲ್ಲ ಸಮಯ ಕೂಡಿಕ್ಕಿ
ಹಾಗೇ ಕಳೆಯಬಲ್ಲವರು
(ನಾನೀಗ ಇದನ್ನ ಫೇಸ್ಬುಕ್ಕಿನಲ್ಲೂ
ವಾಟ್ಸಾಫಿನಲ್ಲೂ ಹಾಕಿ
ಕೈಕಟ್ಟಿ ಕೂರುತ್ತೇನೆ, ಯಾಕೆ ಹೇಳಿ?)
ನಾವಲ್ಲ ಬರೀ
ನಮ್ಮಂತವರೊಂದಿಗೇ
ವಾದ ಮಾಡುವುದು
ಹರಟೆ ಕೊಚ್ಚುವುದು
ಚರ್ಚೆ ಮಾಡುವುದು
ಒಮ್ಮೊಮ್ಮೆ ಗಂಭೀರ ವಿಷಯಕ್ಕೆಲ್ಲ
ನಕ್ಕು ನಾಚಿಕೆ ಹುಟ್ಟಿಸುವುದು
ಕೆಲವೊಮ್ಮೆ ಬೇಡದ್ದಕ್ಕೂ
ಹೌಹಾರಿ ತಿಪ್ಪೆಯಲ್ಲಿ
ತಂದೂರಿ ಹುಡುಕುವುದು
ನಾವೆಲ್ಲ ಸಮಯ ಕೂಡಿಕ್ಕಿ
ಹಾಗೇ ಕಳೆಯಬಲ್ಲವರು
(ಇದನ್ನು ಇಲ್ಲಿಗೆಯೇ ನಿಲ್ಲಿಸಿ-
ಬಿಡಬಹುದು ನಾನೂ, ನೀವೂ)
ಈ ಫೇಸ್ಬುಕ್ಕಿನಲ್ಲೋ
ಆ ಟ್ವಿಟ್ಟರಿನಲ್ಲೋ ಅಥವಾ
ಮನೆಮಂದಿಯೆಲ್ಲ ಆಟವಾಡುವ
ಎಲ್ಲ ಕಡೆ ದಕ್ಕುವ ವಾಟ್ಸಾಫಿನಲ್ಲೋ
ಕಾಲದ ಲಾಳ ಬಿಚ್ಚುತ್ತೇವೆ
ಸಮಯ ಕಳೆದು ಸುಸ್ತಾಗಿ
ಊಟವನ್ನೆಲ್ಲ ಮಾಡಿ ರಾತ್ರಿ
ತಂಪಾಗಿ ಮಲಗಿ ಹಾಗೇ
ಸೂರ್ಯ ಮೂಡಲು
ನಾವೆಲ್ಲ ಮತ್ತೆ ಬರೀ
ನಮ್ಮಂತವರೊಂದಿಗೇ

(28-10-2019)

Saturday, August 3, 2019

ಹಕ್ಕಿಯಾಗಲು ಬೇಡ, ಮೊದಲು ಮಾನವನಾಗು

ಅಲ್ಲೇ ಮೇಲೆ ಹಾರುತ್ತಿದ್ದ
ಹಕ್ಕಿಯ ಕೆಳ ಕರೆದು
ರೆಕ್ಕೆ ಸಾಲ ಪಡೆದೆ
ಅಕ್ಕ ಪಕ್ಕ ಅಂಟಿಸಿಕೊಂಡು
ಸಂತಸದಿ ಜಿಗಿದೆನೊಮ್ಮೆ
ಊಹುಂ ಹಾರಲಾಗಲೇ ಇಲ್ಲ
ಮತ್ತೆ ಒಗ್ಗೂಡಿಸಿ ಜಿಗಿದೆ
ಇಲ್ಲ ಈಗಲೂ ಇಲ್ಲ
ರೆಕ್ಕೆ ಕೊಟ್ಟ ಹಕ್ಕಿ ಅಲ್ಲೇ ಇದೆ
ಹಾರಲಾಗದೇ ಕಾದು ನಿಂತಿದೆ
ಮತ್ತೆರಡು ಬಾರಿ ಪ್ರಯತ್ನಿಸಿದೆ
ಹಾರಲಾಗಲೇ ಇಲ್ಲ
ಕಟ್ಟಿದ್ದ ರೆಕ್ಕೆ ಬಿಚ್ಚಿ
ಹಕ್ಕಿಗೆ ಹಿಂದಿರುಗಿಸಲು
ನಿರಾಯಾಸ ಹಾರಿಹೋಯಿತು
ನಾನಲ್ಲೇ ನಿಂತಿರುವೆ
ಮತ್ತದೇ ಬೇಸರ
ಅದೆ ಸಂಜೆ
ಅದೇ ಏಕಾಂತ
ರೆಕ್ಕೆ ಹಚ್ಚುವ ಆಟ
ಬಾನ ಮುಟ್ಟುವ ತವಕ
ತಾಳ್ಮೆ ತಿಳಿಯದ ಮನಕೆ
ಹಕ್ಕಿಯಾಗುವ ಬಯಕೆ
ಮತ್ತದೇ ಬೇಸರ
ಅದೇ...
----------------------
"ಹಕ್ಕಿಯಾಗಲು ಬೇಡ, ಮೊದಲು ಮಾನವನಾಗು"

Friday, January 18, 2019

ಆಸೆ

ಕಣ್ಬಿಟ್ಟ ದಿನವೇ ತೊಡಿಸಿದ್ದ
ಜೋಡು ಇನ್ನೂ ಕಾಲಿಗಂಟಿಕೊಂಡೇ ಇದೆ
ಕೊನೆಗದು ಚರುಮಸೀಳಿ ರಕ್ತ ಸೇರಿದ್ದೂ
ತನ್ನಸ್ತಿತ್ವ ನೆನಪಿಸುತ್ತ ಚಿಮ್ಮುವುದು
ಇದೆಲ್ಲ ಹಳೇ ವಿಷಯವೇ ವಿಶೇಷವೇನಿಲ್ಲ

ಹಾಗೇ ರಸ್ತೆಗಿಳಿದು ಹೊರಟರೆ
ಕಣ್ಣ ರಾಚುವ ಬಜಾರಿನ ಸರಕುಗಳು
ಹಾಯಾಗಿ ಮಲಗಿರುವ ನನ್ನ ಕನಸುಗಳಿಗೆ
ಬಣ್ಣಬಣ್ಣದ ಬಟ್ಟೆತೊಡಿಸಿ
ತನ್ನಷ್ಟಕ್ಕೇ ಕೊಂಡಿಕಳಚಿ
ಮಂಗಮಾಯವಾಗುತ್ತವೆ ಎಲ್ಲಿಂದೆಲ್ಲಿಗೋ
ಇವೆಲ್ಲ ಏನೆಂಬ ಪ್ರಶ್ನೆಗೆ
ಉತ್ತರ ಕೊಡದೇ ಬದಲಿಗೆ ನಗುವ
ಇವೆಲ್ಲ ಏನು?

ಈ ಜೋಡು ಅಳತೆಗೆ ತಕ್ಕದ್ದೂ ಅಲ್ಲ
ಸರಿದೂಗಿಸುವ ಪ್ರಯತ್ನಪಟ್ಟಷ್ಟೂ ನನ್ನ-
ನದು ವಿಚಿತ್ರ ಮೌನಕ್ಕೆ ತಳ್ಳಿಬಿಡುತ್ತದೆ
ಓಡಿದರೆ ಮುಗ್ಗರಿಸಿ ಬೀಳುವ ಹಾಗೆ
ನಿಂತರೆ ನಿಂತಲ್ಲೇ ಕುಸಿಯುವ ಹಾಗೆ
ತೆಗೆದು ಬಿಸಾಕಲೂ ಏನೋ ಭಯ
ಕಾಲಡಿಗಿನ ಮಣ್ಣೂ ಚರುಮಸೀಳಿ ರಕ್ತ ಸೇರಿದರೆ?

ನಡೆಯುತ್ತೇನೆ
ಕುಸಿಯತೊಡಗಿದರೋಡುತ್ತೇನೆ
ಮುಗ್ಗರಿಸಿದಂತಾಗಲು ಚಿಮ್ಮಿ
ಬೀಗುತ್ತ ನನ್ನಸ್ತಿತ್ವ ತೋರುತ್ತೇನೆ
ಕಾಲ್ತಳಕ್ಕೆ ಮಣ್ಣ ತಾಗಿಸದಷ್ಟು ನಾಜೂಕು
ನನ್ನ (ನಿಮ್ಮ) ಆಸೆಯೆಂಬ ಈ ಚಪ್ಪಲಿ

                                                  (-- 04-01-2019)

Sunday, October 21, 2018

ಅಸ್ತಿತ್ವ

ಭಾಗ-2: ತಪ್ಪು ಸರಿಯ ಪ್ರಶ್ನೆಯೇ ಇಲ್ಲ
ಮಳೆ ಜೋರಾಗಿ ಸುರಿಯುತ್ತಿತ್ತು. ಮಳೆಯಲ್ಲೇ ಓಡುತ್ತಿದ್ದ. ಸರಿಯಾಗಿ ಏನೂ ನೆನಪಿಲ್ಲ. ಬಾಗಿಲು ತೆಗೆದು ಹಾರಿದ್ದೊಂದೇ ನೆನಪು. 
---
ಮನೆಯಲ್ಲಿ ಜಗಳವಾಗಿತ್ತು. ಆಕೆ ಹೀಗೇ ಮುಂದುವರೆದರೆ ತಾನು ತವರು ಸೇರುವೆ ಎಂದಿದ್ದಳು. ಆಕರೆಯದೂ ಸರಿಯಾದ ವಾದವೇ. ಆತ ಅಲ್ಲಿ ದೂರದ ಬೆಂಗಳೂರಿನಲ್ಲಿ, ತಾನು ಇಲ್ಲಿ ಬೀದರಿನಲ್ಲಿ. ಮದುವೆಯಾಗಿ ಎಂಟು ತಿಂಗಳಾಯಿತು. ಎರಡೇ ಬಾರಿ ಬಂದಿದ್ದು. ಇಷ್ಟು ದೂರದ ಬೆಂಗಳೂರು ರಾಜಧಾನಿಯಾಗಲೇ ಲಾಯಕ್ಕಿಲ್ಲ ಎಂದು ಕೂಗಿದ್ದಳು ಫೋನಿನಲ್ಲೊಮ್ಮೆ. ಒಂದು ಕಡೆ ಪ್ರಯಾಣಕ್ಕೆ 13 ತಾಸು, 700 ಕಿಲೋಮೀಟರ್. ವರ್ಗಾವಣೆ ಯತ್ನದಲ್ಲಿದ್ದ. ಬೆಂಗಳೂರಲ್ಲಿ ನೌಕರಿಯೆಂದು ಬೀಗುತ್ತ ಬಂದಿದ್ದ ಹತ್ತು ವರ್ಷಗಳ ಹಿಂದೆ. ತುಂಬಾ ತುಟ್ಟಿ. ಮದುವೆಯ ನಂತರ ಈ ಪಗಾರಿನಲ್ಲಿ ಸಂಸಾರಕ್ಕೆ ಯೋಗ್ಯವಲ್ಲವೆಂದು ಚೆನ್ನಾಗಿ ಅರಿತಿದ್ದ. ಹಾಗಾಗಿ ಬೆಂಗಳೂರಿಗೆ ಸದ್ಯ ಬೇಡ, ತಾನೇ ಆ ಕಡೆ ವರ್ಗ ಮಾಡಿಕೊಂಡು ಬರುವೆ ಎಂದಿದ್ದ. ಇಲ್ಲಿ ಈತ. ಆಕೆ ಅಲ್ಲಿ.
---
ಬೆಂಗಳೂರು ಆಕೆಗೇನೋ ಹಿಡಿಸಿತ್ತು. ಬೀದರಿನ ಬಿಸಿಲಿಗಿಂತ ಇಲ್ಲೇ ಏನೋ ಹಿತ ಎನ್ನಿಸಿರಬೇಕು. ಇದೆಲ್ಲ ಮೊದಮೊದಲ ಖುಷಿ ಎಂಬುದು ಆತನ ವಾದ. ಬಿಎಂಟಿಸಿಗೆ ಮತ್ತೆ ನೂರು ವೋಲ್ವೋ ಬಂದಿಳಿದವು. ಒಂದೂ ಕೇಸ್ ಇಲ್ಲದವರನ್ನ ಆಯ್ಕೆ ಮಾಡಿ ತರಬೇತಿ ನೀಡಿದ್ದರು. ಮಾರುತಿಯೂ ಅವರಲ್ಲೊಬ್ಬ. ವೋಲ್ವೋ ಹತ್ತಿಳಿವವರ ಇಂಗ್ಲೀಷ್ ಕೇಳಿ ಕೇಳಿ ಆರು ತಿಂಗಳಲ್ಲೇ ಸ್ವಲ್ಪ ಇಂಗ್ಲೀಷ್ ಕಲಿತುಬಿಟ್ಟ. ಯೆಸ್ ನೋ ಇಂದ ಪ್ಲೀಸ್ ಕ್ವಿಕ್ಲಿ ಗೆಟ್ ಇನ್-ಸೈಡ್ ಮೇಡಮ್ ತನಕ ಬಂದುಮುಟ್ಟಿತ್ತು. ಅವರ ಸೂಟು ಬೂಟು ನೋಡಿ ತಾನೂ ಇಸ್ತ್ರಿ ಮಾಡಿದ ಬಟ್ಟೆಯನ್ನೇ ತೊಡತೊಡಗಿದ್ದ.
---
ಮೆಟ್ರೋ ಕಾಮಗಾರಿಯಿಂದ ರಸ್ತೆ ಸ್ವಲ್ಪ ಕಿರಿದಾಗಿದೆ. ಯಾವಾಗಿನಂತಲೇ ಓಡಿಸುತ್ತಿದ್ದ. ಏನಾಯಿತೋ ಗೊತ್ತಿಲ್ಲ. ಅಲ್ಲೇ ಇರಲೋ. ಇಳಿದು ಏನಾಯಿತೆಂದು ನೋಡಲೋ. ತನಗಷ್ಟು ಧೈರ್ಯ ಇದೆಯೇ? ಇದೆಲ್ಲ ಯಾವಾಗ ಯೋಚಿಸಿಬಿಟ್ಟೆ ಅವನಿಗೇ ನೆನಪಿಲ್ಲ. ಅರೆಕ್ಷಣದಲ್ಲಿ ಬಾಗಿಲು ತೆರೆದು ಹಾರಿಬಿಟ್ಟ. ಯಾವುದೋ ಗೊತ್ತಿಲ್ಲ ಗಲ್ಲಿಯಲ್ಲಿ ಗುರಿಯಿಲ್ಲದೇ ಓಡುತ್ತಿದ್ದಾನೆ. ಮಳೆ ಬೇರೆ, ಆದರೂ ಮೈತುಂಬ ಬೆವರು. ಕೈ ಕಾಲೆಲ್ಲ ನಡುಕ. ಓಡುತ್ತಲೇ ಕಿಸೆಯಿಂದ ಫೋನು ತೆಗೆದು ಆಕೆಗೆ ಫೋನಾಯಿಸಿದ "ಬೀದರಿಗೆ ಹೊರ್ಟಬಿಡು. ಉಳ್ದಿದ್ದೆಲ್ಲಾ ಕೊನೆಗ್ ಹೇಳ್ತೆನೆ"
---
ತಪ್ಪು ಸರಿಯ ಪ್ರಶ್ನೆಯೇ ಇಲ್ಲ.
--------------------------------------------------------------------------


ಭಾಗ-1: ಹೆಸರೆಲ್ಲಿಯತನಕ
ಒಂಭತ್ತಾಗಿದೆ. ಗಡಿಬಿಡಿಯಲ್ಲಿ ಹೊರಬಂದರೆ ಹತ್ತನೆ ಮಹಡಿಯಲ್ಲಿ ನಿಂತಿದ್ದ ಲಿಫ್ಟ್. ಕೊನೆ ನಿಮಿಷದ ಕೆಲಸ ಬಂದು ತಡವಾಗಿತ್ತು. ಕಾಲಿಗೇನೋ ಹಿಡಿದಂತಾಗಿ ತುಸು ತಡವರಿಸಿದ ಪಟಪಟನೆ ಮೆಟ್ಟಿಲಿಳಿಯುವ ತವಕದಲ್ಲಿ. ಅಲ್ಲೇ ನಿಂತು ಹಿಂದಿರುಗಿ ನೋಡಿದ. ಇಲ್ಲ ಏನೂ ಇಲ್ಲ. ಹಾಗೇ ಕೆಳಗಿಳಿದು ಹೊರಬಂದರೆ ಗಾಳಿ. ಜೋರು ಗಾಳಿ. ಏನೋ ಹಿತವೆನಿಸಿತು ವಿವೇಕನಿಗೆ. ಸಣ್ಣ ಮಳೆ. ತಂಪೆನಿಸುವಂತದ್ದು. ತುಸು ನಡೆದರೆ ಸಿಗುವ ನಿಲ್ದಾಣದಲ್ಲಿ ಬಸ್ಸಿಗೆ ಕಾದು ಕುಳಿತ. ಹತ್ತು ನಿಮಿಷವಾದರೂ ಬಸ್ಸಿಲ್ಲ. ನಾಡಿದ್ದು ರಜೆಯಿದೆ ನಂತರ ರವಿವಾರ ನಾಳೆಯೇ ಬಸ್ಸು ಹತ್ತಿಬಿಡಲೇ ಮನೆಕಡೆಗೆ? ವೋಲ್ವೋ ಬಂದು ನಿಂತಿತು. ಕಿಕ್ಕಿರಿದು ತುಂಬಿದ್ದ ನೋಡಿ ಹತ್ತಲಿಲ್ಲ. ನಿಂತವರು ಒಂದು ಕೈ ಮೇಲೆ ಮಾಡಿ ಕೊಕ್ಕೆ ಹಿಡಿದು ಇನ್ನೊಂದು ಕೈಯಲ್ಲಿ ಮೊಬೈಲ್ ನೋಡುತ್ತಾ ಜೋತಾಡಿಕೊಂಡಿದ್ದರೆ ಕೂತವರಲ್ಲಿ ಹೆಚ್ಚಿನವರು ತೂಕಡಿಸುತ್ತಿದ್ದರು. ಒಂಭತ್ತುವರೆಯಾಗಿಹೋಗಿದೆ.
ಇಷ್ಟೆಲ್ಲ ಹೊತ್ತು ಬಸ್ಸಿಗೆ ಕಾದ ಉದಾಹರಣೆಯೇ ಇಲ್ಲವಲ್ಲ ಎಂದು ಯೋಚಿಸುತಿದ್ದ. ಆಟೋ ಕಂಡಿತು. ಹತ್ತಿ ಕುಳಿತ. ಎಲ್ಲಿ? ಹೆಚ್ ಎ ಎಲ್ ಕ್ರಾಸ್ ತನಕ ಬಿಡಿ. ಅಲ್ಲಿಂದ ಬಸ್ಸು ಸಿಗುತ್ತದೆಯಲ್ಲ. ಆಯ್ತು ಅಂದ. ಮೀಟರ್ ತಿರುಗಿಸಿದ. ವಿವೇಕನಿಗೆ ಸಣ್ಣ ನಗು ಬಂತು. ತುರ್ತಲ್ಲಿರುವುದು ಗೊತ್ತಿದೆ. ಕೇಳಿದಷ್ಟು ಕೊಡುತ್ತಿದ್ದೆ. ಗುರೂ ಇಷ್ಟೊತ್ತಲ್ಲೂ ಮೀಟರ್ ಹಾಕಿದ್ಯಲ್ಲ? ಸುಮ್ಮನೆ ತುಸು ನಕ್ಕು ಕನ್ನಡಿಯಲ್ಲಿ ಮುಖ ನೋಡಿದ. ಯಾವೂರು? ಮಂಡ್ಯ ಸರ್ ಅಂದ. ನಿಮ್ದು? ಅಂಕೋಲಾ ಗೊತ್ತಾ ಕೇಳಿದ ವಿವೇಕ. ಹ್ಞ.. ಇಲ್ಲಾ ಸಾ ಅಂದ. ಕಾರವಾರ ಗೊತ್ತಾ ಅದರ ಹತ್ತಿರ ಅಂತ ಹೇಳಿದಾಗ ಓಹ್ ಅಲ್ಲಾ ಗೊತ್ತಾಯ್ತು ಬಿಡಿ ಅದೇ ಉಡುಪಿ ಹತ್ರ ಅಲ್ವಾ? ತಲೆಯಾಡಿಸಿ ವಿವೇಕ ಸುಮ್ಮನಾದ. ಕೆಲ ಹೊತ್ತು ಮೌನ.
ಸಾರ್ ಎರಡ್ ರೀತಿ ಸಂಪಾದಿಸ್ಬಹದು ಸಾರ್. ಅಂದ್ರೆ. ಮೀಟರ್ ಹಾಕ್ದೇನೂ ಓಡಿಸಬಹುದು ಹಾಕೂ ಓಡಿಸ್ಬಹುದು. ವಿವೇಕ ಇನ್ನೇನ್ ಕೇಳ್ಬೇಕೂ ಅಂತಿರೋವಾಗ 'ಸಾರ್ ನಾನ್ ಯಾಕ್ ಮೀಟರ್ ಹಾಕ್ದೇ ಅಂತಾ ಕೇಳ್ಬೇಡಿ ಈಗ' ಅಂತ ದೊಡ್ದದಾಗಿ ನಕ್ಬಿಟ್ಟ. ಮಳೆ ಜೋರಾಯಿತು. ಲೇಟ್ ಆಗೋಯ್ತು ಸಾರ್. ಹ್ಙಂ ಹೌದು ನಂಗೂ ಲೇಟಾಗೋಯ್ತು. ಸಾರ್ ಲಾಸ್ಟ್ ರೈಡ್ ಅಲ್ವಾ ಅದಿಕ್ಕೆ ಮೀಟರ್ ಹಾಕ್ಬಿಟ್ಟೆ ಅವನಾಗೇ ಅಂದ. ಮತ್ತೆ ಕನ್ನಡಿಯಲ್ಲಿ ನೋಡಿ ತುಸು ನಕ್ಕ. ಉತ್ತರಕ್ಕೆ ವಿವೇಕನೂ ತುಸು ನಕ್ಕ. ಪಕ್ಕದ ಕಾರ್ ನವನು ಹೊಂಡಕ್ಕೆ ಚಕ್ರಹಾಯಿಸಿ ಸಿಡಿದ ಕೆಸರು ನೀರು ಬಂದು ವಿವೇಕನ ಪ್ಯಾಂಟಿಗೆ ಬಡಿಯಿತು. ಊರಿಗೆಂದು ಬಸ್ ಟಿಕೆಟ್ ಬುಕ್ ಮಾಡುತಿದ್ದ ಮೊಬೈಲ್ ಸ್ಕ್ರೀನಿಗೂ ನೀರು ತಗುಲಿ ಒರೆಸಲೆಂದು ಕೈತಾಗಿಸಿ ಏನೇನೋ ಆಗಿ ಬುಕಿಂಗ್ ಪೂರ್ಣ ಆಗಲಿಲ್ಲ. ಏನೋ ಕರೆಂಟ್ ಹೋಗಿ ಬಂದಂತಾಯಿತು ವಿವೇಕನಿಗೆ. ಪೂರ್ಣ ಕತ್ತಲು ತದನಂತರ ಒಮ್ಮೆಲೆ ಬೆಳಕು.
ಸಾರ್ ಈಗೆಲ್ಲಿ ಹೋಗೋಣಾ?
ಇನ್ನೇನು?
ಸಮಯದ ಅರಿವೂ ಇನ್ನಿಲ್ಲ
ಭಾರವೆನಿಸುವ ಯಾವ ಅನುಭವವೇ ಇಲ್ಲ
ಈಗಷ್ಟೇ ಇದ್ದ ಮಿಜಿಮಿಜಿ ಟ್ರಾಫಿಕ್ ಎಲ್ಲಿ?
ಎಲ್ಲ ಖಾಲಿ ಖಾಲಿಯಿದೆಯಲ್ಲ ಇಲ್ಲಿ
ಸಾರ್ ಅಂದಹಾಗೆ ನಿಮ್ ಹೆಸ್ರೇನು?
ತೆರೆದೇ ಇದ್ದ ರೆಪ್ಪೆಯೊಳಗಿನ ಕಣ್ಣ
ಮಿಸುಕಾಡುವ ಯತ್ನದಲ್ಲಿದ್ದ ವಿವೇಕನಿಗೆ
ತನ್ನ ಹೆಸರೇ ನೆನಪಾಗಲಿಲ್ಲ
ಕೆಲ ಸಮಯದ ನಂತರ
ತಾನೂ ನಸುನಕ್ಕ ಮತ್ತೆ ಹೇಳಿದ-
ಎಲ್ಲಾದರೂ ಸರಿ ಗುರೂ
ಇನ್ನೇನು?
ಹೋಗುತ್ತಲಿರೋಣ
-------------------------------------------------------------------------------------------
(July 28 & Oct 2, 2018)

Tuesday, September 4, 2018

ನಿನ್ನದೇನು ನಿನಗೇನು ನಿನ್ನದೆಷ್ಟು

ಹಾಗೆಲ್ಲ ಕಾಣಿಸದ
ಕನಸೆಂಬುದು ಕಣ್ಮುಚ್ಚಿ
ತಾನು ತೊಟ್ಟ ಬಟ್ಟೆ ಬಿಚ್ಚಿ
ಬಳಿ ಕರೆಯಲು ಹೋಗಿ
ಇನ್ನೇನು ಮೈದವಡುವುದೊಂದೇ
ಬಾಕಿಯಿರಲು ಇಷ್ಟೊತ್ತು
ತೆಪ್ಪಗೆ ಕೂತಿದ್ದ ಕೆಪ್ಪು ಕಿವಿ
ನಿಮಿರಿ ಚುರುಕಾಗಿಹೋಯಿತು
ಯಾರೋ ಪಿಸುಗುಟ್ಟುವ ಹಾಗೆ
“ನಿನ್ನದೇನು?”
ಸುಲಭಕ್ಕೆ ಕೈಗೆಟುಕದ
ತಣ್ಣನೆಯ ಗಾಳಿಗೋ
ದಿಕ್ಕು ಹಲವು ಆದರೆ
ಆಯ್ಕೆಯೊಂದೆ ಎಂದು
ನಾನೆಂದುಕೊಂಡಿರಲು
ಹಾಗೇ ತೂರಿಬಂದ
ಆಲದೆಲೆಯೊಂದು ಟಪ್ಪನೆ
ಕೆನ್ನೆಗೊಡೆದು ಹೋಯಿತು
ಮುಚ್ಚಿಹೋದ ಕಣ್ರೆಪ್ಪೆಯ
ಸಾವಕಾಶ ತೆರೆಯಲು
ಮನಸಲ್ಲೇನೋ ಭಾವ
“ನಿನಗೇನು?”
ಬರೀ ಸಂಬಂಧಗಳಾಟ
ಭಾವನೆಗಳೋಟ
ಸಮೀಕರಿಸಿ ನಿನ್ನೆಗಳ
ಬಿಡಿಸುವುದರೊಳಗೇ ಕಣ್ಮುಂದೆ
ನಾಳೆಯೆಂಬ ಭಿನ್ನರಾಶಿ
ಇದರೊಳಗೇ ಅಪ್ಪೀತಪ್ಪಿ
ಇಂದೆಂಬ ಭಾಷೆಯ
ಪುಸ್ತಕ ತೆರೆಯಲು ಬರೆದಿದೆ
ಮೊದಲ ಪುಟದಲ್ಲೇ
“ನಿನ್ನದೆಷ್ಟು?”
-- 04 Spet 2018

Sunday, October 29, 2017

ಶಕ್ತಿ

ಹತ್ತು ಹೂವ ಕಿತ್ತು
ಆಚೆ ಕಾಲನೆತ್ತಿಡಲು
ಕಚ್ಚಿತೊಂದು ಮುಳ್ಳು
ಸಿಟ್ಟಲ್ಲಿ ಶಪಿಸಲಾಯಿತು
ಮತ್ತೆ ನಾಳೆ ಬರಲು
ಅದೇ ಹೂವ ಕೀಳಲು
ಕನಸು ಕಂಡ ರಾತ್ರಿ
ಬೆಳಗಾಗಿ ಕಣ್ಬಿಡಲು
ಕಟ್ಟೆಯೊಡೆಯಿತು ಕನವರಿಕೆ
ಜಾರಿಹೋದ ಅನುಭವ
ಸುಳ್ಳು ಸತ್ಯಗಳ ನಡುವೆ
ವಸ್ತುವದೊಂದಕ್ಕೆ ತಾನು
ಕದಲದಿರಲು ಬೇಕು
ಅದೇನೋ ಶಕ್ತಿ
ನಾನು ನಾನಾಗಿಯೇ
ಇರಲೂ ಕೂಡ
ಭಾವಕ್ಕೆ ಅದಾಗಲೇ
ಬಣ್ಣ ಬಡಿದಿದ್ದೇನೆ
ನೋಡುವ ಕಂಗಳಾದರೂ
ಮುಸಿನಗಲೆಂದು
ಒಳಗಿನ ಬಣ್ಣಕ್ಕೆ ಬೆಲೆ ಕಡಿಮೆ
ಎಟುಕುವುದೇ ಸತ್ಯ ಸುಲಭಕ್ಕೆ
ಗಾಳಿಗೆ ಬಿದ್ದ ಈ ಹಗುರ
ಆಸೆಯ ತುಂಡುಗಳು
ಅದೆಲ್ಲೋ ಸಾಗಿವೆ
ನಿನ್ನೆ ನಾಳೆಗಳ ನಡುವೆ
ನೆಲ ತಲುಪಲೊಲ್ಲದೇ
ತೆರೆದ ಮುಗಿಲ ಕಡೆಗೆ


-- 29-Oct-2017

Saturday, September 16, 2017

ಈ ನಗರ

ಬರೀ ತೇಲುವಿಕೆಯಲ್ಲಿ
ತೊಡಗುತ್ತೇನೆ ಆಗಾಗ
ಬರೀ ತೇಲುವಿಕೆ
ನಿರ್ಭಾವುಕ ನಿರ್ಲಿಪ್ತ
ನಿರಾತಂಕ ನಿರಾಕಾರ
ತೆರೆದ ಕಿಟಕಿಯಾಚೆಗಿಂದ
ಬರುವ ಈ ನಿಲ್ಲದ
ಮಹಾನಗರದ ಶಬ್ಧಗಳಷ್ಟೇ
ಮೊದಮೊದಲು
ಕೊನೆಕೊನೆಗೆ ಯೋಚನೆಗಳೇ
ನಿಲ್ಲತೊಡಗುತ್ತವೆ ನೂರಾರು
ಚಿತ್ರಗಳು ಚಿತ್ತದಲ್ಲಿ ಬಿಚ್ಚಿಡಲು
ಮೊದಲ ಪ್ರಾಶಸ್ತ್ಯ
ತನಗೆಂದೇ ವಾದಿಸಲು
ಕಛೇರಿಯ ಏಸಿ ಶಬ್ಧ
ಶೆಹನಾಯಿಯಾಗುತ್ತಿದೆ
ಎಲ್ಲ ಬದಿಗಿಟ್ಟು ಇನ್ನೇನು
ಕಣ್ಮುಚ್ಚಿ ಕುಳಿತರೆ ಮನಸಲ್ಲಿ
ಹಗಲು ರಾತ್ರಿಯಾಗುತ್ತಿದೆ
ಮೋಡ ಸೀಳಿ ಭೋರ್ಗರೆವ ಮಳೆ
ನರನಾಡಿ ಹೊಕ್ಕು ಹುಚ್ಚೆಬ್ಬಿಸಿದೆ
ಮತ್ತೆ ಬೇಕು ಈ ತೇಲುವಿಕೆ
ಇನ್ನೂ ಬೇಕೆಂದು ಚಡಪಡಿಸುವಾಗ
ಸಟ್ಟನೆ ಎಚ್ಚರವಾಗುತ್ತದೆ
ರವಿವಾರ ಕಳೆದು ಸೋಮವಾರ
ಕಣ್ಣುಜ್ಜಿ ಕಿಟಕಿಯಿಂದಾಚೆ
ಕಣ್ಣಾಯಿಸಿದರೆ
ಈ ನಗರವಿನ್ನೂ ತೇಲುತ್ತಲೇ ಇದೆ
ಬರೀ ತೇಲುವಿಕೆ
ನಿರ್ಭಾವುಕ ನಿರ್ಲಿಪ್ತ
ನಿರಾತಂಕ ನಿರಾಕಾರ
ನಿನ್ನೆಗಳ ಅದೆಲ್ಲೋ ಬಿಚ್ಚಿಟ್ಟು ಬಂದ
ನಾನು ನಗರ
ನಗರ ನಾನು

(17-09-2017)



Saturday, July 8, 2017

ಇದು ಕೊನೆಯಲ್ಲ

ನೀನೆಂಬ ಬಯಕೆ ನನ್ನೀ ಹರಿವಿನ ಒಳಗೆ ಮೊಳಕೆಯೊಡೆಯುವ ಮೊದಲೇ ಚಿವುಟಿಬಿಡಲೇ? ಏಕೆ ಹೇಳು? ಮೋಡ ಬಂದು ಮರೆಯಾಗುವ ಬದಲು ಬರದಿರುವುದೇ ಒಳಿತು. ಮೇಲಾಗಿ ಜತನದಿಂದ ಕಾಪಿಟ್ಟ ಮನಸಲ್ಲ ಇದು, ಒಡೆದುಹೋಗುವುದು ಎರಡೇ ಎರಡು ಕಣ್ಣಹನಿ ಬಿದ್ದರೂ. ರಭಸಕ್ಕೆ ಬಾಗದ ಬಗೆಯನ್ನೂ ಕಲಿಸಿಲ್ಲ ಇದಕೆ, ನಿನ್ನುಸಿರ ಗಾಳಿಗೆ ಹಾಗೇ ಹಾರಿಹೋದೀತು! ಗೊತ್ತಿದೆ ನಾಳೆಯೆಂಬುದಿದೆ ಇಂದು ಕಳೆದರೆ, ಕಾಯುವೆ ಕಣ್ಮುಚ್ಚಿ. ಕಲಿಸುವೆ ಕಸರತ್ತ ಮನಕೆ, ಚಿಗುರ ಚೂಟುವ ಕೆಲಸ ಸುಲಭದ್ದಲ್ಲ ನೋಡು! ಬೇಕೆಂದು ಮಾಡುವುದಲ್ಲ, ಸಹಜ ಸ್ವಾರ್ಥವೆಂದುಕೋ ಮತ್ತು ಅಗತ್ಯ. ಕವನವಿದು, ಕಟ್ಟು ಕಥೆಯಲ್ಲ, ಕವನ. ಅಳುಕು, ಪ್ರತೀ ಸಾಲಿನ ತುದಿಗೆ ನಿಂತ ನೀನು ಹಾಗೇ ಜಾರಿಹೋಗದಿರಲೆಂದು ಜಾಗ ಬಿಡದೇ ಬರೆದಿರುವೆ ಅಷ್ಟೇ. ಕಡೆಯ ಸಾಲಿನ ಕೊನೆಯಿದು. ಇದೇ ಕೊನೆ. ನಾ ಬೇರೆ ನೀ ಬೇರೆ.

(July 1st 2017)

Wednesday, June 14, 2017

ನಾ ಮಾತ್ರ ಬದಲಾದೆ!

ನನಗೆ ಇಷ್ಟೇ ಇಷ್ಟು
ಚೂರು ಸಾಕು ಎಂಬ
ಮನದ ಖಯಾಲಿ
ಬಚ್ಚಲ ಮನೆಯ ಹಂಡೆ-
ನೀರು ಬಿಸಿಯಾಗುವ
ಮೊದಲೇ ಬೆಂಕಿನಂದಿಸಿ
ಮರೆಯಾಗಿಹೋಗಿತ್ತು
ನಿನ್ನೆ ರಾತ್ರಿ ಮಾತ್ರ ಹೊಯ್ದ
ಮಳೆ ಮನೆಯಂಗಳದ
ತುಳಸೀಗಿಡದ ಬೇರಿಗೆ ಒಂದೇ-
ಒಂದು ಹನಿ ಮುಟ್ಟಿಸುವ
ಮೊದಲೇ ಘಳಿಗೆ
ಬೀಸಿದ ಗಾಳಿಗೆ
ಗಿಡ ಕಿತ್ತು ನೆಲಕ್ಕೂರಿತ್ತು.
ಹಗಲೆಲ್ಲ ಹೆಣಗಾಡಿ ಹಾರುತ್ತ
ಕೆಂಪು ಸೂರ್ಯನ ಪಕ್ಕ
ಹಕ್ಕಿ ಹೆಕ್ಕಿ ತುತ್ತ ಜೊತೆಗೆ
ತವರ ಸೇರುವ ಮೊದಲೇ
ಇದ್ದ ಮೂರು ಮರಿಗಳಲ್ಲಿ
ಒಂದು ಹಸಿದ ಹೊಟ್ಟೆ ಬಿರಿದು
ಸ್ರಾವ ಸೋರಿತ್ತು
ಮತ್ತೆರಡು ಮಾಯವಾಗಿತ್ತು
ಇಷ್ಟೇ ಇಷ್ಟು ಚೂರು ಸಾಕು
ಎಂಬ ಸಂಯಮ
ಸತ್ತು ಮತ್ತೆ ಹುಟ್ಟಿ
ನೆಲವ ತಟ್ಟಿ ನಡೆವ ಮೊದಲೇ
ಮತ್ತೆ ಮತ್ತೆ ಬೇಕು
ಹೆಚ್ಚು ಹೆಚ್ಚು ಬೇಕು ಎಂಬ
ತವಕ ಮನೆಯಮಾಡಿತ್ತು
ಅದೇ ಹಳೆಯ
ಬಚ್ಚಲುಮನೆಯ ಪಕ್ಕ
ಅದೇ ತುಳಸೀಗಿಡದ
ಮುರಿದ ಕೊಂಬೆಯ ಕಡ್ಡಿ
ಹಿಡಿದು ಅದೇ ಹಕ್ಕಿ
ಗೂಡ ಬುಡವ ಗಟ್ಟಿಮಾಡಲು
ಹಾರಿಹೋಯಿತು
ನನಗೂ ಗಿಡಕ್ಕೂ ಹಕ್ಕಿಗೂ
ಬಚ್ಚಲುಮನೆಗೂ ಈಗ
ವರ್ಷ ಸಾವಿರವಾಯಿತು


(14-06-2017)

Sunday, May 7, 2017

ಹೆಸರಿಲ್ಲದವರು // ಕವನ

ಹೆಸರಿಲ್ಲದವರು

ಇಲ್ಲಿ ಹೆಸರಿಲ್ಲದವರೇ ಬರುತ್ತಾರೆ
ಅಥವಾ ಬಂದ ಮೇಲೆ
ಹೆಸರ ಬದಲಾಯಿಸುತ್ತಾರೆ
ಹೆಸರಿಗೇನು ಕಡಿಮೆಯೇ
ಬೆಲೆಯೆಂತದು ಹೆಸರಿಗೆ

ಏನು ನಿನ್ನ ಹೆಸರು? ಕೇಳಿದರೆ
ಊಟದಂಗಡಿಯಂತೆ ಉದ್ದುದ್ದ
ಪಟ್ಟಿ ಕಣ್ಣೆದುರಿಗೆ ಹಿಡಿದು
'ಆಯ್ಕೆ ನಿಮ್ಮದೇ' ಎನ್ನುತ್ತಾರೆ

ಆಗಾಗ್ಗ ಮಳೆ ಬಿದ್ದರೂ
ತಂಪಾಗದವರು
ಮಳೆಯನ್ನೇ ತಿಳಿಯದವರೂ
ಕೆಂಡ ನುಂಗುವವರೂ ಇತ್ಯಾದಿ
ಇಲ್ಲಿಗೇ ಬಂದು ಮೀಯುತ್ತಾರೆ
ಹೆಸರ ಕಳಚಿಟ್ಟು ಮೀ-
ಯುವುದರಲ್ಲೇನೋ ಸುಖ

ದಣಿವಿಗೆಲ್ಲ ಹೆದರದ ಇವರು
ಇಲ್ಲಿ ಜಾತ್ಯಾತೀತತೆ ಮೆರೆಯುತ್ತಾರೆ
ಜಾತಿ-ಧರುಮವೆಲ್ಲ  ಮನೆಯೊಳಗೆ
ಏನೋ ಒಂದು ಹೆಸರು ಬಿಡಿ
ಯಾವುದೋ ಒಂದು ಧರುಮ
ಅದಕೆಲ್ಲ ಇಲ್ಲಿ  ಎಲ್ಲಿ ಸಮಯ?

ಗಾಳಿಗೆಲ್ಲ ಮೈಯೊಡ್ಡಿ
ಅಂಗೈ ಹಿಸುಕಿ
ತಾಪ ಅಳೆಯುವ ಇವರಿಗೆ
ಒಂದೇ ಒಂದು ಚಿಂತೆ
ನಾಳೆ ಬೆಳಗಾದರೆ ತನಗೆ
ಮತ್ತದೇ ಹೆಸರೇ?

ದೇವ ಬಳಿ ಬಂದರೆ ಇವರೆಲ್ಲ
ಪ್ರತಿದಿನ ಹುಟ್ಟಿ-ಸಾಯುವ
ವರವನ್ನೇ ಕೇಳುತ್ತಾರೆ
ಇಟ್ಟ ಹೆಸರೇ ಇವರಾಗಿ ಹೋಗಿರಲು
ಹೊಸದಾಗಿ ಬಾಳಿ ಬದುಕಲು
ಬೇರೆ ಮಾರ್ಗ ಇದೆಯೇ?

(07-May-2017)

Wednesday, March 8, 2017

ಆರದ ದೀಪ


ನಿಂತುಬಿಟ್ಟ
ಎಲ್ಲಿ ಏಕೆ ಹೇಗೆ ನೆನಪಿಲ್ಲ
ಬಿದ್ದ ಮಳೆಗೆ ಬೇರು
ತಂಪಾಗಿಹೋಯಿತಿರಬೇಕು
ಸೇವಿಸಿರಬೇಕು ದೇಹ
ಸಾಕಷ್ಟು ಗಾಳಿ
ಅನಿಸಿರಬೇಕು
ಮತ್ತೇಕೆ ಇನ್ನೇಕೆ
ನಿಂತುಬಿಟ್ಟ
ಕತ್ತೆತ್ತಿ ಹೇಳಿದ್ದ ಅಂದೇ
‘ಲೇಖನಿಗಿನ್ನೆಷ್ಟು ತುಂಬಲಿ ಶಾಯಿ
ಮುಖಕಿನ್ನೆಷ್ಟು ಬಳಿಯಲಿ ಬಣ್ಣ
ನೋಯ್ದಿದೆ ಮನವೆಲ್ಲ
ಇನ್ನೆಷ್ಟು ಕಣ್ಣರಳಿಸಿ ನೋಡಲಿ ನಾ’
ಸುತ್ತಿರುವ ವೃತ್ತಪರಿಧಿಯ ಸುತ್ತ
ಹಿಂದೆಯೂ ಮುಂದೆಯೂ
ಎಡಕ್ಕೂ ಬಲಕ್ಕೂ ಚಲಿಸದೇ
ನಿಂತುಬಿಟ್ಟ ಹಾಗೇ
ತಿರುಗೇ ತಿರುಗುವ
ಭೂಮಿಯ ಮೇಲೆ
ಸವೆದ ಹೆಜ್ಜೆಗೇನು ಬೆಲೆ
ಅಕಾರಣ ಇನ್ನೆಷ್ಟು ನಡೆಯಲಿ
ಎಂದೋ ಏನೋ
ನಿಂತಲ್ಲೇ ಕಣ್ಮುಚ್ಚಿ ಕುಸಿದುಹೋದ
ಲೇಖನಿಯ ಮುಚ್ಚಳಿಕೆಯಿನ್ನೂ
ತೆರೆದಿರುವಾಗಲೇ

(08-03-2017)

Friday, January 6, 2017

ಸುಲಭದ ಲೆಕ್ಕ

 ಸುಲಭದ ಲೆಕ್ಕ
 
ನಾನು ಏಕಗತಿಯ ದ್ವೇಷಿಸುವವ
ನಾಲ್ಕೂ ದಿಕ್ಕಿಗೆ ಬಾಣ ಬಿಡಲು ಹಾತೊರೆಯುವವ
ಅದೂ ಒಟ್ಟೊಟ್ಟಿಗೇ
ನಗುವವ
ಅಳಲು ಬಯಸದವ
ಮೆರೆಯುವವ
ಮರೆಯುವವ
ನಿನ್ನೆ ಇಂದು ಮತ್ತೆ ನಾಳೆಯ

ಹಾಗೂ
ನಾನು ಸೋಲಲೊಲ್ಲದವ
ತಲೆ ಮೇಲಿನ ಸೂರ್ಯಗೇ ಸವಾಲೆಸೆಯುವವ
ಬೆಳೆಯುವವ
ಬೀಗುವವ
ಕುಗ್ಗಿಸಿ ಕುಣಿಯುವವ

ನಾನು
ತಾನು ಮಾತ್ರ ನಾನೆಂದು ನಂಬಿದವ
ಒಳಗೊಳಗೇ
ಕುದಿಯುವವ
ಕದಿಯುವವ
ಲಾಸ್ಯಕ್ಕೆ ಒಗ್ಗುವವ
ದಾಸ್ಯಕ್ಕೆ ದಣಿಯದವ

ನಾನು
ಅಂಕಗಣಿತದ ಮೊದಲ ಪುಟದ ಲೆಕ್ಕ
ಬಿಡಿಸಲು ತೀರಾ ಸುಲಭದವ
ನಿನ್ನೆ ಹುಟ್ಟಿ
ಒಂದೇ ದಿನ ಬದುಕಿದವ

ಕನ್ನಡಿ ಮುಂದೆ ನಿಂತು
ಅವಳೋ ಅವನೋ ಆಗಬಯಸುವ
ನಾನು
ಅಂತೂ ಕೊನೆಯ ಸಾಲು ತಲುಪಿರುವ ನೀವೇ

-- 06-01-2017

Friday, October 7, 2016

ಸಮಯ


ರೆಯುವಷ್ಟೇ ಸಾಲುಗಳಲ್ಲಿ ಅವಿತಿದ್ದರೆ
ಅದೇನೋ ಬೇರೆ
ಹಾಳೆಗಳ ಹೊರಗೂ ಹೋಗಿ ಹರಟುವೆಯಲ್ಲ
ಬಿಡಲಿ ಹೇಗೆ?

ಅಲೆಯ ರಭಸಕ್ಕೆ ಎದುರಾಗಿ
ನಾನಾಗಿಯೇ ತಲೆಕೊಟ್ಟರೂ
ಕವನ ಬರೆಯುವ ಕಲೆ ಮರೆಯಿತೇ ಹೊರತು
ನಿನ್ನ ನೆನಪಲ್ಲ
ಸಮುದ್ರವಾಗಿಬಿಡು ನೀ
ನಾ ನದಿ ನೀರಾಗುವೆ

ಬಾರಿ ಬಾರಿ ಭಾರೀ ಭಾರ
ದಾಹ ತೀರದಷ್ಟು ದೂರ ತೀರ
ಆಚೆಗಿರಲಿ ಕೊನೆಗೆಂದೋ ಸಿಗುವ ಫಲ
ಪ್ರಯತ್ನಿಸಲೂ ಕೊಡದೇ ಕಾಡುವೆಯಲ್ಲ
ಕಾಯಲಿ ಹೇಗೆ?

ನೆನಪಿಡು
ನಾನೂ ನಿಂತಿರುವೆ
ನಿನ್ನಂತೆಯೇ
ರಂಗಸ್ಥಳದ ಮೇಲೆ
ಬಣ್ಣ ಬಳಿದುಕೊಂಡು
ಕಣ್ಣರಳಿಸಿಕೊಂಡು
ನಗೆತೊಟ್ಟುಕೊಂಡು
ಒಳಗೊಳಗೇ ಕನವರಿಸಿಕೊಂಡು
ಪ್ರತಿದಿನ ಪ್ರತಿಕ್ಷಣ

ಸಮಯ
ಸಮುದ್ರವಾಗಿಬಿಡು ನೀ
ನಾ ನದಿ ನೀರಾಗುವೆ
  
--07-Oct-2016

Sunday, May 8, 2016

ನಿಲ್ಲು



ನಾನು
ಹಲವು ದಿಕ್ಕುಗಳ ಕಡೆಗೆ ನಡೆವೆ
ನಿನ್ನೊಟ್ಟಿಗೆ
ನೀನ್ಯಾರು?
ಅದೋ ಗಾಳಿ
ನೀರು
ಭೂಮಿ
ಹುಟ್ಟುತ್ತ ದಣಿಯುತ್ತ ಸಾಯುತ್ತ
ನಿನ್ನ ನಲುಮೆ
ಇರುವುದಷ್ಟೇ ಗೊತ್ತು
ಹುಟ್ಟಿಲ್ಲ ದಣಿವಿಲ್ಲ ಸಾವಿಲ್ಲ

ಆಕಾರ
ನನ್ನೀ ಯೋಚನೆ
ಭಾವನೆ
ಕಲ್ಪನೆ
ಹೆದರಿ ಹೌಹಾರಲು
ನಿರಂತರ ತಳಮಳ
ಎಲ್ಲಿ?
ಪ್ರೀತಿ ತೆನೆ ನಿರಾಕಾರ
ಎಲ್ಲಿ?
ಗ್ರಹಿಕೆಗಿದೆ ಕಾಣುತ್ತಿಲ್ಲ

ಭರವಸೆ
ಬಯಕೆಗೆ
ಮನಸಿಗೆ
ಬದುಕುವ ಭಾವಕ್ಕೆ
ಹೇಗೆ?
ಕತ್ತೆತ್ತಿ ನಿಂತರೆ
ಆಕಾಶ ತೆರೆದಿಡುವ
ಅಸಂಖ್ಯ ನಕ್ಷತ್ರ

ತವಕ
ಚಿಗುರಿಗೆ
ಪಾಡ್ಯಕ್ಕೆ
ನಸುಕಿಗೆ
ಏಕೆ?
ಗೆಲುವಿಗೆ
ಹಿಂದೆಲ್ಲೋ ಸೋತ ತಾಳ್ಮೆ
ಓಡಲು
ಬೆಳೆಯಲು

ನಾನ್ಯಾರು?
ಇರುವಿಕೆಯ
ಕಲಿತಿಲ್ಲ
ಇತಿಮಿತಿಯ
ಅರಿವಿಲ್ಲ

ನಿಲ್ಲು
ನಗು
ಬೆರೆ


ಕಣ್ತೆರೆ